ಸಾಂಭಾಲ್(ಉತ್ತರ ಪ್ರದೇಶ): ಶಾಲೆ ಬಿಟ್ಟ ಸಂದರ್ಭದಲ್ಲಿ ಎಲ್ಲ ಮಕ್ಕಳು ಕೊಠಡಿಯಿಂದ ಹೊರಹೋಗಿರುವ ಬಗ್ಗೆ ಪರಿಶೀಲನೆ ನಡೆಸಬೇಕಾಗಿರುವುದು ಶಿಕ್ಷಕರು ಹಾಗೂ ಸಿಬ್ಬಂದಿಯ ಕರ್ತವ್ಯ. ಆದರೆ, ಇಲ್ಲೊಂದು ಶಾಲೆಯಲ್ಲಿ ಪರಿಶೀಲನೆ ನಡೆಸದೇ ಕೊಠಡಿ ಬಂದ್ ಮಾಡಿಕೊಂಡು ಹೋಗಿರುವ ಕಾರಣ ಸುಮಾರು 18 ಗಂಟೆಗಳ ಕಾಲ ಬಾಲಕಿ ಶಾಲೆಯಲ್ಲೇ ಉಳಿದುಕೊಂಡಿರುವ ಪ್ರಕರಣ ನಡೆದಿದೆ.
ಉತ್ತರ ಪ್ರದೇಶದ ಸಾಂಭಾಲ್ ಎಂಬಲ್ಲಿ ಈ ಘಟನೆ ನಡೆದಿದೆ. ಹೀಗಾಗಿ, 18 ಗಂಟೆಗೂ ಅಧಿಕ ಕಾಲ ಮಗು ಶಾಲಾ ಕೊಠಡಿಯಲ್ಲೇ ಬಾಲಕಿ ಬಂಧಿಯಾಗಿದ್ದಳು. ಇದೀಗ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ. ಮಂಗಳವಾರ ಘಟನೆ ನಡೆದಿದ್ದು, ಬುಧವಾರ ಬೆಳಗ್ಗೆ ಶಾಲೆ ಕೊಠಡಿ ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಶೌಚಾಲಯದಲ್ಲಿ ಮಗು ಕೂಡಿ ಹಾಕಿದ ಪ್ರಕರಣ: ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ವಜಾಕ್ಕೆ ಶಿಫಾರಸು
ಸಾಂಭಾಲ್ ಜಿಲ್ಲೆಯ ಗುನ್ನೌರ್ ತಹಸಿಲ್ ಧನರಿ ಪಟ್ಟಿಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, 1ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿಯೋರ್ವಳು ಕೊಠಡಿಯಲ್ಲಿ ಮಲಗಿದ್ದಳು. ಈ ವೇಳೆ ಸಿಬ್ಬಂದಿ ಕೊಠಡಿ ಲಾಕ್ ಮಾಡಿಕೊಂಡು ಹೋಗಿದ್ದಾರೆ. ಮಗು ಮನೆಗೆ ಬಾರದ ಕಾರಣ ಅಜ್ಜಿ ಶಾಲೆಗೆ ಬಂದು ಮೈದಾನದಲ್ಲಿ ವೀಕ್ಷಣೆ ಮಾಡಿದ್ದಾರೆ. ಆದರೆ, ಮಗು ಪತ್ತೆಯಾಗಿಲ್ಲ. ಹೀಗಾಗಿ, ಕುಟುಂಬಸ್ಥರೆಲ್ಲರೂ ಸೇರಿಕೊಂಡು ಗ್ರಾಮದ ಸುತ್ತಮುತ್ತಲೂ ಹುಡುಕಾಟ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ ಶಾಲೆ ಕೊಠಡಿ ತೆರೆದಾಗ ಮಗು ಅಲ್ಲಿರುವುದು ಕಂಡುಬಂದಿದೆ. ಶಿಕ್ಷಕರು ಹಾಗು ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಷಕರು ಮನವಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಬ್ಲಾಕ್ ಶಿಕ್ಷಣ ಅಧಿಕಾರಿ ಪೋಪ್ ಸಿಂಗ್, ಬಾಲಕಿ ಆರೋಗ್ಯವಾಗಿದ್ದು, ಪರಿಶೀಲನೆ ನಡೆಸಲಾಗುವುದು ಎಂದರು.