ಲಕ್ನೋ(ಉತ್ತರ ಪ್ರದೇಶ): ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ಕಚೇರಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ಕೆಲ ದುಷ್ಕರ್ಮಿಗಳು ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉತ್ತರ ಪ್ರದೇಶ ಲಕ್ನೋದ ಮದರ್ಪುರ ಅನ್ವರಿ ಪೊಲೀಸ್ ಠಾಣೆಯ ಬಾರಾಬಂಕಿಯಲ್ಲಿ ಈ ಘಟನೆ ನಡೆದಿದೆ. ಯುವತಿ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ನಿನ್ನೆ ಸಂಜೆ ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು ಆಕೆಯನ್ನ ತಡೆದು, ಬಾಕುವಿನಿಂದ ಇರಿದಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ಯುವತಿ, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಇದರ ಬೆನ್ನಲ್ಲೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದ ಯುವತಿಯನ್ನ ನೋಡಿರುವ ಕೆಲವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದಿರುವ ಪೊಲೀಸರು ಯುವತಿಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಖುಲಾಯಿಸಿದ ಅದೃಷ್ಟ... ಮೀನುಗಾರನಿಗೆ ಕೋಟ್ಯಧಿಪತಿಯನ್ನಾಗಿಸಿದ ಅಪರೂಪದ ಮೀನು!
ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಿವ ಚರಣ್ ಲಾಲ್ ತಿಳಿಸಿರುವ ಪ್ರಕಾರ, ಹಲ್ಲೆಗೊಳಗಾದ ಯುವತಿ ರೈಲ್ವೆ ನಿಲ್ದಾಣದ ಬಳಿಕ ನ್ಯೂಸ್ ಪೇಪರ್ ಇನ್ಸ್ಟ್ಯೂಟ್ನಲ್ಲಿ ಕೆಲಸ ಮಾಡುತ್ತಿದ್ದಳು. ಇದು ಆಕೆಯ ಚಿಕ್ಕಮ್ಮನ ಕುಟುಂಬಕ್ಕೆ ಇಷ್ಟವಿರಲಿಲ್ವಂತೆ. ಇದೇ ಕಾರಣಕ್ಕಾಗಿ ಅನೇಕ ಸಲ ವಾಗ್ವಾದ ಸಹ ನಡೆದಿತ್ತು ಎಂದು ತಿಳಿಸಿದ್ದಾರೆ. ಇದೇ ಕಾರಣಕ್ಕಾಗಿ ಆಕೆಯ ಮೇಲೆ ದಾಳಿ ನಡೆದಿರಬಹುದು ಎಂದು ಶಂಕಿಸಿದ್ದಾರೆ.