ಪಾಟ್ನಾ (ಬಿಹಾರ): ಬಿಹಾರದ ರಾಜಧಾನಿ ಪಾಟ್ನಾದಲ್ಲಿ ದುರಂತ ಘಟನೆಯೊಂದು ಜರುಗಿದೆ. 20 ರ ಹರೆಯದ ಯುವತಿ ರೇಖಾ ಅವರಿಗೆ ನೀಡಲಾದ ತಪ್ಪು ಚಿಕಿತ್ಸೆಯಿಂದ ಅಂಗ ಛೇದನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಪರಿಣಾಮ ಕಂಕರ್‌ಬಾಗ್‌ನಲ್ಲಿರುವ ಮಹಾವೀರ ಆರೋಗ್ಯ ಸಂಸ್ಥಾನದ ಮಾನ್ಯತೆ ರದ್ದುಗೊಳಿಸುವಂತೆ ಮತ್ತು ಬಾಲಕಿಗೆ ನ್ಯಾಯ ನೀಡುವಂತೆ ಒತ್ತಾಯಿಸಿ ಬಾಲಕಿಯ ಕುಟುಂಬವು ನ್ಯಾಯಾಲಯದ ಮೆಟ್ಟಿಲೇರಿದೆ.
ಹೆಚ್ಚಿನ ವಿವರ: ರೇಖಾ ಅವರ ಕಿವಿಯಲ್ಲಿ ಸಮಸ್ಯೆ ಇದೆ ಎಂದು ಆರೋಗ್ಯ ಸಂಸ್ಥಾನವೊಂದಕ್ಕೆ ಹೋಗಿದ್ದಾರೆ. ಜುಲೈ 11 ರಂದು ಕಿವಿಯ ಆಪರೇಷನ್ ಮಾಡಲಾಗಿದೆ. ಆ ಬಳಿಕ ಅಲ್ಲಿನ ವೈದ್ಯರು ಸೂಚಿಸಿದ ಚುಚ್ಚುಮದ್ದನ್ನು ನರ್ಸ್ ವೋರ್ವರು ರೇಖಾಗೆ ನೀಡಿದ್ದಾರೆ. ಇದಾದ ನಂತರ ರೇಖಾ ಎಡಗೈಯಲ್ಲಿ ತೊಂದರೆ ಶುರುವಾಗಿದೆಯಂತೆ. ಅಷ್ಟೇ ಅಲ್ಲದೆ ಕೈಯ ಬಣ್ಣ ಹಸಿರು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದೆ. ಜೊತೆಗೆ ಕೈ ನಿಷ್ಕ್ರಿಯಗೊಂಡಿದೆ.
ಘಟನೆ ಬಗ್ಗೆ ಅಲ್ಲಿನ ನರ್ಸ್ ಹಾಗೂ ವೈದ್ಯರಿಗೆ ದೂರು ನೀಡಿದರೂ ಯಾರೂ ಸರಿಯಾಗಿ ಸ್ಪಂದಿಸಿಲ್ಲ. ಬಹಳ ಸಮಯದ ನಂತರ ವೈದ್ಯರು ಪ್ರತಿಕ್ರಿಯೆ ನೀಡಿ ಸರಿಯಾಗುತ್ತದೆ ಹೋಗಿ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ, ಚುಚ್ಚುಮದ್ದಿನ ನಂತರ ರೇಖಾ ತುಂಬಾ ತೊಂದರೆಗೀಡಾಗಿದ್ದಾರೆ.
ಹಲವು ಆಸ್ಪತ್ರೆಗಳಿಂದ ನಿರ್ಲಕ್ಷ್ಯ: ತಂಗಿಯ ಸಮಸ್ಯೆ ಹೆಚ್ಚಾದಾಗ ಆಸ್ಪತ್ರೆಯವರು ಐಜಿಐಎಂಎಸ್‌ಗೆ ಕಳುಹಿಸಿದರೂ ಅಲ್ಲಿ ದಾಖಲು ಮಾಡಿಕೊಳ್ಳಲಿಲ್ಲ ಎಂದು ರೇಖಾ ಸಹೋದರಿ ರೋಶನಿ ಹೇಳಿದ್ದಾರೆ. ಇದಾದ ಬಳಿಕ ಖಾಸಗಿ ಆಸ್ಪತ್ರೆಗೆ ತೋರಿಸಿದಾಗ ಕೈ ಕತ್ತರಿಸಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಬಳಿಕ ಎಲ್ಲರೂ ದೆಹಲಿ ಏಮ್ಸ್‌ಗೆ ತೆರಳಿದ್ದಾರೆ. ಅಲ್ಲಿಯೂ ಚಿಕಿತ್ಸೆ ನೀಡಿಲ್ಲ. ಇಷ್ಟೆಲ್ಲ ಘಟನೆ ನಂತರ ಪಾಟ್ನಾದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ವೈದ್ಯರ ತಂಡ ಮೊಣಕೈ ಕತ್ತರಿಸುವ ಮೂಲಕ ರೇಖಾ ಅವರ ಜೀವ ಉಳಿಸಲಾಗಿದೆ.
ಖಿನ್ನತೆಗೆ ಒಳಗಾದ ಯುವತಿ : ಆಗಸ್ಟ್ 4 ರಂದು ಮಧ್ಯಾಹ್ನ 2:00 ಗಂಟೆಗೆ ರೇಖಾ ಅವರ ಕೈ ಕತ್ತರಿಸಲಾಯಿತು ನಂತರ ಅವರು 15 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದರು. ಈ ಘಟನೆಗೂ ಮುನ್ನ ರೇಖಾಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಈಗ ಯುವಕ ಮದುವೆಗೆ ನಿರಾಕರಿಸಿದ್ದಾನೆ. ಮದುವೆಗಿಂತ ಹೆಚ್ಚಾಗಿ ಕೈ ಕಳೆದುಕೊಂಡೆನಲ್ಲಾ ಎಂಬ ನೋವು ರೇಖಾ ಅವರನ್ನು ಕಾಡುತ್ತಿದೆಯಂತೆ.
ಉದ್ಯೋಗಕ್ಕೆ ಬೇಡಿಕೆ: ವಕೀಲ ರೂಪಮ್ ಮಾತನಾಡಿ ಈ ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ದ ನಂತರ, ಸಮಸ್ಯೆಯನ್ನು ಇತ್ಯರ್ಥಗೊಳಿಕೊಳ್ಳಲು ಕುಟುಂಬ ಮುಂದಾಗಿದೆ. ಇದಲ್ಲದೇ, ಆ ಹುಡುಗಿಗೆ ಸರ್ಕಾರಿ ನೌಕರಿ ಕೊಡಿಸಬೇಕೆಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂಪೂರ್ಣ ಪ್ರಕರಣವನ್ನು ದೆಹಲಿಯ ವಕೀಲ ವಿಶಾಲ್ ಕುಮಾರ್ ಸಿಂಗ್ ನೋಡಿಕೊಳ್ಳುತ್ತಿದ್ದಾರೆ ಮತ್ತು ಇದಕ್ಕಾಗಿ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ. ರೇಖಾ ಸಹ ಈ ಎಲ್ಲಾ ವಿಷಯದಲ್ಲಿ ಸಹಾಯ ಮಾಡುತ್ತಿದ್ದಾಳೆ. ಇಡೀ ವಿಷಯವು ವೈದ್ಯಕೀಯ ನಿರ್ಲಕ್ಷ್ಯದಿಂದ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ: ಪ್ರವಾಹ ಪೀಡಿತ ಗಂಗಾ ನದಿಯಲ್ಲಿ ದೋಣಿ ಮಗುಚಿ ಆರು ಜನರ ಸಾವು