ದರ್ಭಾಂಗಾ (ಬಿಹಾರ) : ತಾಯಿ ಒರಳಿನಲ್ಲಿ ಚಟ್ನಿ ರುಬ್ಬುತ್ತಿದ್ದರು. ಇದನ್ನು ಕಂಡ 11 ವರ್ಷದ ಮಗಳು ಬೇಸರಗೊಂಡು ಅಮ್ಮನಿಗೆ ಮಿಕ್ಸರ್ ತಂದು ಕೊಡಬೇಕು ಎಂಬು ಶಪಥ ಮಾಡಿದಳು. ಇದಕ್ಕಾಗಿ ತನಗೆ ಅಪ್ಪ ಕೊಡುತ್ತಿದ್ದ ಖರ್ಚಿನ ಹಣದಲ್ಲಿ ಸ್ಪಲ್ಪ ಕೂಡಿಟ್ಟು, ಕೊನೆಗೆ ಅಂಗಡಿಯಲ್ಲಿ ಮಿಕ್ಸರ್ ಖರೀದಿಸಿ ತಾಯಿಗೆ ಬಳುವಳಿಯಾಗಿ ನೀಡಿದ್ದಾಳೆ..!
ಇದು ಸಿನಿಮಾ ಕತೆಯೂ ಅಲ್ಲ, ಕಾಲ್ಪನಿಕ ಪ್ರಸಂಗವೂ ಅಲ್ಲ. ತಾಯಿಯ ಕಷ್ಟ ನೋಡಲಾಗದೇ 11 ವರ್ಷದ ಪುಟ್ಟ ಕಂದ ತನ್ನ ತಾಯಿಗೆ ನಿಜವಾಗಿಯೂ ಅಡುಗೆ ತಯಾರಿಕೆಗೆ ನೆರವಾಗಲೆಂದು ಮಿಕ್ಸರ್ ಅನ್ನು ಉಡುಗೊರೆಯಾಗಿ ನೀಡಿದ್ದಾಳೆ. ಇಂತಹ ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದ್ದು ಬಿಹಾರದ ದರ್ಭಾಂಗ್ನ ದಂತೆರಸ್ ಎಂಬಲ್ಲಿ.
ಅಮ್ಮನ ಕಷ್ಟಕ್ಕೆ ಮಿಡಿದ ಬಾಲೆ: ರಾಮ್ ಚೌಕ್‌ನ ನಿವಾಸಿಯಾದ 11 ವರ್ಷದ ಕುಮಾರಿ ಎಂಬಾಕೆ ತನ್ನ ತಾಯಿ ಕಲ್ಲಿನ ಒರಳಿನಲ್ಲಿ ಮಸಾಲೆ ರುಬ್ಬುವುದನ್ನು ನೋಡುತ್ತಿದ್ದಳು. ತನ್ನ ನೆರೆಹೊರೆಯವರು ಮಿಕ್ಸರ್ ಬಳಸುತ್ತಿದ್ದರೂ, ತನ್ನ ಮನೆಯಲ್ಲಿ ಇಲ್ಲದ್ದು ಆಕೆಗೆ ಬೇಸರ ತಂದಿತ್ತು. ಇದಕ್ಕಿಂತಲೂ ಮಿಗಿಲಾಗಿ ತಾಯಿ ಕಷ್ಟ ಪಡುತ್ತಿರುವುದನ್ನ ಆಕೆಗೆ ಸಹಿಸಲಾಗಲಿಲ್ಲ. ಹೇಗಾದರೂ ಮಾಡಿ ಮಿಕ್ಸರ್ ಖರೀದಿಸಬೇಕು ಎಂದು ಅಂದುಕೊಂಡ ಬಾಲಕಿ, ಹಣ ಕ್ರೋಢೀಕರಿಸಲು ಶುರು ಮಾಡಿದಳು.
ಅಪ್ಪ ನೀಡುತ್ತಿದ್ದ ಹಣವನ್ನು ಹಲವು ತಿಂಗಳಿಂದ ಕೂಡಿಟ್ಟಳು. ಕೊನೆಗೆ 1800 ರೂಪಾಯಿ ಹಣದಲ್ಲಿ ಮಿಕ್ಸರ್ ಖರೀದಿಗೆ ಹೋದಾಗ, ಅದರ ಬೆಲೆ 4100 ಇತ್ತು. ಪುಟ್ಟ ಬಾಲಕಿ ತಾನು ಕೂಡಿಟ್ಟ ಚಿಲ್ಲರೆ ಹಣವನ್ನೆಲ್ಲಾ ಅಂಗಡಿ ಮಾಲೀಕನ ಮುಂದೆ ಎಣಿಸಿ ಕೊಟ್ಟಾಗ, ಆತನ ಮನಸ್ಸು ಕರಗಿ ಬಾಲಕಿಗೆ ಕಡಿಮೆ ಹಣದಲ್ಲೂ ಮಿಕ್ಸರ್ ನೀಡಿ ಔದಾರ್ಯ ಮೆರೆದಿದ್ದಾನೆ. ಬಾಲಕಿಗೆ ಇರುವ ತಾಯಿ ಮೇಲಿನ ಪ್ರೀತಿಗಿಂತಲೂ ಮಿಕ್ಸರ್ ಬೆಲೆ ಕಡಿಮೆ ಅನ್ನಿಸಿ ಹುಡುಗಿಗೆ ಮಿಕ್ಸರ್ ಅನ್ನು ನೀಡಿದ್ದಾನೆ.
ಅಮ್ಮನಿಗೆ ಮಿಕ್ಸರ್ ಗಿಫ್ಟ್; ತನಗೆ ಮಿಕ್ಸರ್ ಯಾಕೆ ಬೇಕು ಎಂಬುದನ್ನು ಹಂಚಿಕೊಂಡ ಬಾಲಕಿ, ನಮ್ಮ ಮನೆಯಲ್ಲಿ ಮಿಕ್ಸರ್ ಇಲ್ಲ. ಅಮ್ಮ ಒರಳಿನಲ್ಲಿ ಸಾಂಬಾರು ಮಸಾಲೆ ರುಬ್ಬಬೇಕು. ಇದು ತ್ರಾಸದಾಯಕ ಕೆಲಸ. ಪಕ್ಕದ ಮನೆಯವರಲ್ಲಿ ಮಿಕ್ಸರ್ ಇದೆ. ನಾವ್ಯಾಕೆ ಮಿಕ್ಸಿ ಹೊಂದಬಾರದು ಎಂದು ಯೋಚಿಸಿದೆ. ಅದಕ್ಕಾಗಿ ಅಪ್ಪ ಕೊಡುತ್ತಿದ್ದ ಹಣದಲ್ಲಿ ಒಂದೋ, ಎರಡೋ ರೂಪಾಯಿಯನ್ನು ದಿನವೂ ಕೂಡಿಟ್ಟು, ಮಿಕ್ಸರ್ ಖರೀದಿಸಲು ಬಂದಿದ್ದೇನೆ. ಅದನ್ನು ಅಮ್ಮನಿಗೆ ಉಡುಗೊರೆಯಾಗಿ ನೀಡಬೇಕು ಎಂದು ಬಾಲಕಿ ಹೇಳಿದಳು.
ಅಮ್ಮನ ಪ್ರೀತಿ ಮುಂದೆ ಬೆಲೆ ಗೌಣ: ಬಾಲಕಿ ತನ್ನಲ್ಲಿದ್ದ ಹಣದಲ್ಲಿ ಮಿಕ್ಸರ್ ಖರೀದಿಸಲು ಬಂದಾಗ ಕೂಡಿಟ್ಟ ಹಣ ಲೆಕ್ಕ ಹಾಕಲಾಯಿತು. ಅದರಲ್ಲಿ 1800 ರೂಪಾಯಿ ಇತ್ತು. ಬಾಲಕಿಗೆ 4100 ರೂಪಾಯಿ ಬೆಲೆಯ ಮಿಕ್ಸರ್ ಇಷ್ಟವಾಯಿತು. ಆದರೆ, ಬಾಲಕಿಯ ಮುಗ್ಧತೆ ಮತ್ತು ಅಮ್ಮನ ಪ್ರೀತಿಗೆ ಮೆಚ್ಚಿದ ಅಂಗಡಿ ಮಾಲೀಕ ವಿವೇಕ್ ಶರ್ಮಾ ಆಕೆ ಇಷ್ಟಪಟ್ಟ ಮಿಕ್ಸಿಯನ್ನೇ ನೀಡಿದರು.
ಇದನ್ನೂ ಓದಿ: ₹450 ಸಿಲಿಂಡರ್ ಗ್ಯಾಸ್, ಬಡ ಹೆಣ್ಣು ಮಕ್ಕಳಿಗೆ ಶಿಕ್ಷಣ ಉಚಿತ: ಮಧ್ಯಪ್ರದೇಶ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ