ಜಶ್ಪುರ(ಛತ್ತೀಸ್‌ಗಢ): ಸಹೊದರನೊಂದಿಗೆ ಆಟವಾಡುತ್ತಿದ್ದ ವೇಳೆ ಇಲಿ ಹಿಡಿಯುವ ಸಲಿಕೆ ತಗುಲಿ 3 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಛತ್ತೀಸ್‌ಗಢದ ಜಶ್ಪುರದಲ್ಲಿ ಸಂಭವಿಸಿದೆ. ಸಲಿಕೆ ತಗುಲಿ ಬಾಲಕಿಯ ಕತ್ತು ಕೊಯ್ದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಪಹಾರಿ ಕೊರ್ವಾ ಗ್ರಾಮದ ಜಗೇಶ್ ರಾಮ್ ಹಾಗೂ ಮುನ್ನಾ ರಾಮ್ ಎಂಬುವರು ಕುಟುಂಬದವರೊಂದಿಗೆ ಇಲಿ ಬೇಟೆಗೆಂದು ಭತ್ತದ ಜಮೀನಿಗೆ ತೆರಳಿದ್ದರು. ಇವರ ಪುಟ್ಟ ಮಕ್ಕಳಿಬ್ಬರು ಆಟವಾಡುವಾಗ ಆಕಸ್ಮಿಕವಾಗಿ ದುರ್ಘಟನೆ ಸಂಭವಿಸಿದೆ.
ಮುನ್ನಾ ರಾಮ್ ಅವರ 5 ವರ್ಷದ ಮಗ ಕೈಯಲ್ಲಿ ಸಲಿಕೆ ಹಿಡಿದುಕೊಂಡು ಆಟವಾಡುವಾಗ ಆಕಸ್ಮಿಕವಾಗಿ 3 ವರ್ಷದ ಬಾಲಕಿಯ ಕತ್ತಿಗೆ ಜೋರಾಗಿ ತಾಕಿದೆ. ಇದರಿಂದ ಕತ್ತು ಕೊಯ್ದು ಜಗೇಶ್ ರಾಮ್ ಮಗಳು(3 ವರ್ಷದ ಬಾಲಕಿ) ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ ಎಂದು ತಿಳಿದುಬಂದಿದೆ.
ರಾಮ್ ಕುಟುಂಬಸ್ಥರು ಹಿಂದುಳಿದ ಬುಡಕಟ್ಟಿಗೆ ಸೇರಿದ್ದು, ಬೆಳೆ ಕಟಾವು ಮಾಡಿದ ನಂತರ ಹೊಲಗಳಲ್ಲಿ ಕಂಡುಬರುವ ಇಲಿಗಳನ್ನು ಹಿಡಿದು ತಿನ್ನುತ್ತಾರೆ. ಬಿಲದಲ್ಲಿರುವ ಇಲಿಗಳನ್ನು ಹುಡುಕಿ ಹಿಡಿಯುತ್ತಾರೆ. ಬಾಲಕ ಕೂಡ ಸಲಿಕೆಯೊಂದಿಗೆ ಆಟವಾಡುತ್ತ ಬಿಲದಲ್ಲಿ ಇಲಿ ಹುಡುಕಲು ಯತ್ನಿಸಿದ್ದು, ಆಗ ಆಕಸ್ಮಿಕವಾಗಿ ಕೈಯಲ್ಲಿದ್ದ ಸಲಿಕೆಯು ಬಾಲಕಿಯ ಕತ್ತಿಗೆ ತಗುಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ದುರಂತ: ಸ್ನಾನಕ್ಕೆ ಇಳಿದಿದ್ದ ಶಿಕ್ಷಕ, ಐವರು ವಿದ್ಯಾರ್ಥಿಗಳು ನೀರುಪಾಲು