ನವದೆಹಲಿ: ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಉತ್ತರ ದೆಹಲಿ ಹೆದ್ದಾರಿಯಲ್ಲಿ ನಿಂತಿದ್ದ ಬಸ್‌ನಲ್ಲಿ ಕುಳಿತು ವಾಂತಿ ಮಾಡಿಕೊಳ್ಳುತ್ತಿರುವಾಗ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಮೃತ ಯುವತಿಯನ್ನು ಬೇಬಿ ಎಂದು ಗುರುತಿಸಲಾಗಿದೆ. ಆಕೆ ತನ್ನ ಸಹೋದರನಿಗೆ ರಾಖಿ ಕಟ್ಟಲು ನೋಯ್ಡಾದಿಂದ ಲುಧಿಯಾನಕ್ಕೆ ಹೋಗುತ್ತಿದ್ದಳು ಎಂದು ತಿಳಿದು ಬಂದಿದೆ. ತಕ್ಷಣ ಯುವತಿಯನ್ನು ಸಮೀಪದ ಸತ್ಯವಾಡಿ ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಚಾಲಕ ತನ್ನ ಟ್ರಕ್ ಅನ್ನು ಬಸ್‌ನ ಪಕ್ಕದಲ್ಲೇ ಚಲಾಯಿಸಿದ್ದರಿಂದ ಯುವತಿಯ ತಲೆ ಅಪ್ಪಚ್ಚಿಯಾಗಿದೆ.
ಅಪಘಾತ ಹೇಗಾಯಿತು?: ದೆಹಲಿಯ ಐಎಸ್‌ಬಿಟಿ ಕಾಶ್ಮೀರಿ ಗೇಟ್‌ನಿಂದ ಹರಿಯಾಣ ರೋಡ್‌ವೇಸ್ ಬಸ್‌ನಲ್ಲಿ ಯುವತಿ ತನ್ನ ಕುಟುಂಬದೊಂದಿಗೆ ಲೂಧಿಯಾನಕ್ಕೆ ಹೋಗುತ್ತಿದ್ದಳು. ಸಹೋದರಿಯರಿಬ್ಬರು ತಮ್ಮ ಸಹೋದರನಿಗೆ ರಾಖಿ ಕಟ್ಟಲು ಲೂಧಿಯಾನಕ್ಕೆ ಹೋಗುತ್ತಿದ್ದ ವೇಳೆ ಒಬ್ಬ ಯುವತಿಗೆ ವಾಂತಿ ಶುರುವಾಗಿದೆ. ಅಲಿಪುರ ಶನಿ ದೇವಸ್ಥಾನದ ಬಳಿ ಯುವತಿ ವಾಂತಿ ಮಾಡಿಕೊಳ್ಳಲು ಆರಂಭಿಸಿದಾಗ ಬಸ್ಸನ್ನು ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಯುವತಿ ಬಸ್ಸಿನ ಕಿಟಕಿಯಿಂದ ಕತ್ತು ಹೊರಕ್ಕೆ ಚಾಚಿ ವಾಂತಿ ಮಾಡಿಕೊಳ್ಳುತ್ತಿದ್ದಳು. ಆಗ ಅತಿವೇಗದಲ್ಲಿ ಬಂದ ಟ್ರಕ್ ಯುವತಿಯ ಕುತ್ತಿಗೆಗೆ ಡಿಕ್ಕಿ ಹೊಡೆದಿದೆ. ಚಾಲಕನು ಟ್ರಕ್ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಕೂಡಲೇ ಪ್ರಯಾಣಿಕರು ಆಂಬ್ಯುಲೆನ್ಸ್‌ಗಾಗಿ ಕರೆ ಮಾಡಿದರು. 15 ನಿಮಿಷಗಳ ಕಾಲ ಆಂಬ್ಯುಲೆನ್ಸ್‌ಗಾಗಿ ಕಾಯುತ್ತಿದ್ದರು. ಆದರೂ ಯಾವುದೇ ಆಂಬ್ಯುಲೆನ್ಸ್ ಬರಲಿಲ್ಲ. ಬಳಿಕ ಬಸ್ ಚಾಲಕ ಎಲ್ಲಾ ಪ್ರಯಾಣಿಕರೊಂದಿಗೆ ನರೇಲಾದ ಸತ್ಯವಾಡಿ ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ಬಸ್ಸನ್ನು ತೆಗೆದುಕೊಂಡು ಹೋದರು. ಅಲ್ಲಿ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟೋತ್ತಿಗಾಗಲೇ ಆಕೆ ಮೃತಪಟ್ಟಿದ್ದಳು. ಯುವತಿ ಸಾವನ್ನಪ್ಪಿರುವುದರ ಬಗ್ಗೆ ವೈದ್ಯರು ಖಚಿತಪಡಿಸಿದರು.
ಪ್ರಕರಣದ ತನಿಖೆಯಲ್ಲಿ ತೊಡಗಿದ ಪೊಲೀಸರು: ಘಟನೆ ಕುರಿತು ಮಾಹಿತಿ ಪಡೆದ ಅಲಿಪುರ ಠಾಣೆ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಸಂಪೂರ್ಣ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಯುವತಿಯ ಮುಖ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲಿಪುರ ಠಾಣೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಆರೋಪಿ ಟ್ರಕ್ ಚಾಲಕನನ್ನು ಹಿಡಿಯಲು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಲಾಗಿತ್ತು. ಸುದ್ದಿ ತಿಳಿದು ಆಸ್ಪತ್ರೆಗೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಓದಿ: ಬೆಳಗಾವಿಯಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಕೊಲೆ.. ಸಿಸಿಟಿವಿಯಲ್ಲಿ ಕೃತ್ಯ ಸೆರೆ