ಧಮತರಿ(ಛತ್ತೀಸ್ಗಢ): ಮಹಿಳೆಯರನ್ನು ದೌರ್ಜನ್ಯಗಳಿಂದ ರಕ್ಷಿಸಲು ತಂತ್ರಜ್ಞಾನವನ್ನು ಬಳಸಿ ಅನೇಕ ಸಾಧನಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಛತ್ತೀಸ್ಗಢದ ಬಿ.ಕಾಂ ವಿದ್ಯಾರ್ಥಿನಿ ಸಿದ್ಧಿ ಪಾಂಡೆ ಇಂಥಹದ್ದೇ ಸಾಧನಗಳನ್ನು ಅಭಿವೃದ್ಧಿಪಡಿಸಿ, ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸಿದ್ಧಿ ಪಾಂಡೆ ವಿಶೇಷವಾದ ಶೂಗಳನ್ನು ಅಭಿವೃದ್ಧಿಪಡಿಸಿದ್ದು, ಈ ಶೂಗಳನ್ನು ಧರಿಸಿದರೆ ಮಹಿಳೆ ಅಪಾಯದಿಂದ ಪಾರಾಗಬಹುದಾಗಿದೆ.
ಸೊಳ್ಳೆಗಳ ನಿಯಂತ್ರಣಕ್ಕೆ ಬಳಸುವ ಬ್ಯಾಟ್ನಿಂದ ಶೂಗಳನ್ನು ತಯಾರಿಸಲಾಗಿದ್ದು, ಇದು ಮಹಿಳೆಯರ ಮೇಲೆ ಕಿರುಕುಳ ನೀಡಲು ಬರುವ ದುಷ್ಕರ್ಮಿಗಳಿಗೆ 1000 ವೋಲ್ಟ್ ಸಾಮರ್ಥ್ಯದಲ್ಲಿ ಶಾಕ್ ನೀಡಬಲ್ಲದಾಗಿದೆ. ಧಮತರಿ ಮೂಲದ ಸಿದ್ಧಿ ಪಾಂಡೆ ಮತ್ತೊಂದು ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಆ ಸಾಧನವನ್ನು ತಮ್ಮ ಪರ್ಸ್ನಲ್ಲಿ ಇಟ್ಟುಕೊಂಡು ತಮ್ಮ ಕೆಲಸಗಳಿಗೆ ಮಹಿಳೆಯರು ತೆರಳಬಹುದಾಗಿದೆ.
ಒಂದು ವೇಳೆ ಅಪಾಯ ಒದಗಿದರೆ, ಕೇವಲ ಒಂದು ಬಟನ್ ಒತ್ತಿದರೆ ಪೊಲೀಸ್ ವಾಹನದ ಶಬ್ದ ಗಟ್ಟಿಯಾಗಿ ಕೇಳುತ್ತದೆ. ಈ ಮೂಲಕ ಅಕ್ಕಪಕ್ಕದವರ ಗಮನವನ್ನು ತಮ್ಮೆಡೆಗೆ ಸೆಳೆಯಬಹುದಾಗಿದೆ. ಶಬ್ದ ಮಾತ್ರವಲ್ಲದೇ ಈ ಸಾಧನ ಮೊಬೈಲ್ನ ಜಿಪಿಎಸ್ ಅನ್ನು ಕೂಡಾ ನಿಯಂತ್ರಿಸಲಿದ್ದು, ಮನೆಯವರಿಗೆ ಮೊಬೈಲ್ ಇರುವ ಲೊಕೇಶನ್ ಸ್ವಯಂಚಾಲಿತವಾಗಿ ಕಳುಹಿಸುತ್ತದೆ. ಅಂದಹಾಗೆ, ಈ ಸಾಧನ ತಯಾರಿಕಾ ವೆಚ್ಚ ಕೇವಲ 750 ರೂಪಾಯಿಯಾಗಿದ್ದು, ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ಧಿ ಪಾಂಡೆ 'ಮೊದಲು ನಾನು ನನ್ನ ಮಹಿಳಾ ಸುರಕ್ಷತಾ ಸಾಧನವನ್ನು ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮತ್ತು ನಂತರ ರಾಜ್ಯ ಮಟ್ಟದ ಪ್ರದರ್ಶನದಲ್ಲಿ ಪ್ರದರ್ಶಿಸಿದೆ. ಅಲ್ಲಿ ಆಯ್ಕೆಯಾದ ನಂತರ, ಐಐಟಿ ದೆಹಲಿಯಲ್ಲಿ ನನ್ನ ಸಾಧನವನ್ನು ಪ್ರಸ್ತುತಪಡಿಸುವ ಅವಕಾಶ ನನಗೆ ಸಿಕ್ಕಿತು ಎಂದಿದ್ದಾರೆ. ಸಿದ್ಧಿ ಪಾಂಡೆ ಅಭಿವೃದ್ಧಿಪಡಿಸಿರುವ ಸಾಧನಗಳಿಗೆ ಜಪಾನ್ನಿಂದ ಅವರಿಗೆ ಆಹ್ವಾನ ನೀಡಿತ್ತಾದರೂ, ಕೋವಿಡ್ ಕಾರಣದಿಂದ ಅವರು ತೆರಳಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ಪತಿ ಮೃತಪಟ್ಟ 11 ತಿಂಗಳ ನಂತರ ಮಗು ಪಡೆದ ಮಹಿಳೆ.. ಅದ್ಹೇಗೆ ಅಂದ್ರೇ ಹೀಗೆ..