ಭೋಜ್‌ಪುರ (ಬಿಹಾರ): ಹಳೆಯ ಭೂ ವಿವಾದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಎಂಟು ವರ್ಷದ ಬಾಲಕಿಯೊಬ್ಬಳ ಗುಂಡಿಕ್ಕಿ ಕೊಲೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಹತ್ಯೆಯಾದ ಅಮಾಯಕ ಬಾಲಕಿಯನ್ನು ಆರಾಧ್ಯ ಕುಮಾರಿ ಎಂದು ಗುರುತಿಸಲಾಗಿದೆ. ಇಲ್ಲಿನ ಉದ್ವಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೇಲೈ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ಜರುಗಿದೆ.
ಮೃತ ಆರಾಧ್ಯ ಕುಮಾರಿ ಇಲ್ಲಿನ ನಿವಾಸಿ ಕೃಷ್ಣ ಕುಮಾರ್ ಸಿಂಗ್ ಎಂಬುವವರ ಪುತ್ರಿಯಾಗಿದ್ದು, ಈ ಹಿಂದೆ ಬಾಲಕಿಯ ಚಿಕ್ಕಪ್ಪನನ್ನೂ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹೀಗಾಗಿಯೇ ಈ ಘಟನೆಯು ಅನುಮಾನಾಸ್ಪದವಾಗಿದೆ. ಬಾಲಕಿ ಕೊಲೆಯನ್ನು ಯಾರು ನಡೆಸಿದ್ದಾರೆ ಎಂದು ಗೊತ್ತಾಗಿಲ್ಲ. ಶನಿವಾರ ಬೆಳಗ್ಗೆ ಅರಾಹ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೂ ವಿವಾದ ಕಾರಣ ಎಂದ ಅಪ್ಪ: ಮಗಳು ಆರಾಧ್ಯ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ತಂದೆ ಕೃಷ್ಣಕುಮಾರ್ ಸಿಂಗ್, 2013ರಿಂದ ಆರು ಬಿಘಾ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರೊಂದಿಗೆ ನಮ್ಮ ಕಲಹವಿದೆ. ಇದೇ ವಿವಾದದಲ್ಲಿ 2019ರಲ್ಲಿ ನನ್ನ ಕಿರಿಯ ಸಹೋದರ ಸತ್ಯಂ ಸಿಂಗ್ ಅವರನ್ನೂ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಆಗ ಇದೇ ಆರೋಪಿಗಳು ನನ್ನನ್ನೂ ಹತ್ಯೆ ಮಾಡಲು ಬಯಸಿದ್ದಾರೆ. ಇದೇ ಉದ್ದೇಶದಿಂದ ಮನೆಗೆ ಬಂದಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂ ಹಗರಣ: ಸಿಬಿಐನಿಂದ ತೇಜಸ್ವಿ ಯಾದವ್ ವಿಚಾರಣೆ.. ಸಹೋದರಿ ಮಿಸಾ ಭಾರ್ತಿಗೆ ಇಡಿ ಗ್ರಿಲ್
ಶುಕ್ರವಾರ ರಾತ್ರಿ ಊಟ ಮುಗಿಸಿ ಎಲ್ಲರೂ ಮನೆಯಲ್ಲಿ ಕುಳಿತಿದ್ದರು. ಈ ವೇಳೆ ನಾಲ್ವರು ಶಸ್ತ್ರಧಾರಿ ದುಷ್ಕರ್ಮಿಗಳು ಮನೆಗೆ ಬಂದಿದ್ದು, ನನ್ನ ಮಗಳು ಆರಾಧ್ಯ ಗೇಟ್ ತೆರೆದರು. ಆಗ ದುಷ್ಕರ್ಮಿಗಳು ನನ್ನ ಬಗ್ಗೆ ವಿಚಾರಿಸಲು ಆರಂಭಿಸಿದ್ದಾರೆ. ಅಪ್ಪ ಮನೆಯಲ್ಲಿಲ್ಲ ಎಂದು ಆರಾಧ್ಯ ಹೇಳಿದ್ದಾಳೆ. ಇದಾದ ಬಳಿಕ ದುಷ್ಕರ್ಮಿಗಳು ಬೆದರಿಸುವ ದಬ್ಬಾಳಿಕೆ ಶುರು ಮಾಡಿದ್ದಾರೆ. ಇದರಿಂದ ನನ್ನ ಹೆಂಡತಿ ಮತ್ತು ತಾಯಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ನಂತರದಲ್ಲಿ ದುಷ್ಕರ್ಮಿಗಳು ಮನೆಯಲ್ಲೇ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಇದರಲ್ಲಿ ನನ್ನ ಮಗಳಿಗೆ ಬುಲೆಟ್ ತಗುಲಿ ಸಾವನ್ನಪ್ಪಿದ್ದಾಳೆ. ಘಟನೆಯ ನಂತರ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೃತ ಬಾಲಕಿಯ ತಂದೆ ವಿವರಿಸಿದ್ದಾರೆ.
ಮನೆಯಲ್ಲಿ ಸಿಸಿ ಕ್ಯಾಮರಾ ಸ್ವಿಚ್ ಆಫ್ ಆಗಿತ್ತು - ಎಸ್ಪಿ: ಈ ಘಟನೆ ಬಗ್ಗೆ ಭೋಜ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ಮಾತನಾಡಿ, ಶನಿವಾರ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಉದ್ವಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂಟು ವರ್ಷದ ಬಾಲಕಿಯ ಭುಜಕ್ಕೆ ಯಾರೋ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಬಂದಿತ್ತು. ಈ ಮಾಹಿತಿ ಬಂದ ತಕ್ಷಣವೇ ಪೊಲೀಸ್ ತಂಡ ಸ್ಥಳಕ್ಕೆ ತಲುಪಿತ್ತು. ಅಷ್ಟರಲ್ಲೇ ಬಾಲಕಿ ಮೃತಪಟ್ಟಿದ್ದಳು ಎಂದು ತಿಳಿಸಿದ್ದಾರೆ.
ಸದ್ಯ ಪೊಲೀಸರು ಪ್ರಕರಣದ ತನಿಖೆಯಲ್ಲಿ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶುಕ್ರವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಮನೆಯಲ್ಲಿ ಸಿಸಿಟಿವಿಯೂ ಇದೆ. ಆದರೆ, ಈ ಸಂದರ್ಭದಲ್ಲಿ ಸಿಸಿ ಕ್ಯಾಮರಾ ಸ್ವಿಚ್ ಆಫ್ ಆಗಿದ್ದು, ಪೊಲೀಸರು ನೋಡಿದಾಗ ಅದು ಆನ್ ಆಗಿದೆ. ಜೊತೆಗೆ ಮನೆಯಲ್ಲಿ ರಕ್ತದ ಯಾವುದೇ ಕುರುಹು ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಷ್ಯಾ ಯುವತಿ ಆತ್ಮಹತ್ಯೆ ಯತ್ನ: ಆಕೆಯ ಗೆಳೆಯನನ್ನು ಬಂಧಿಸಿದ ಪೊಲೀಸರು