ನಾಗೌರ್(ರಾಜಸ್ಥಾನ): ಭೂಮಿ ಮೇಲೆ ಹೆಣ್ಣಾಗಿ ಹುಟ್ಟಬಾರದು ಎಂಬ ಕಾಲವಿತ್ತು. ಆದರೆ ಇದೀಗ ಎಲ್ಲವೂ ಬದಲಾಗಿದೆ. ಪುರುಷರಿಗೆ ಸಿಗುವಷ್ಟೇ ಸಮಾನತೆ ಅವಳಿಗೂ ಲಭ್ಯವಾಗುತ್ತಿದ್ದು, ಎಲ್ಲ ವಿಭಾಗಗಳಲ್ಲೂ ಮೆಲುಗೈ ಸಾಧಿಸುತ್ತಿದ್ದಾಳೆ. ಹೀಗಾಗಿ ಮನೆಯಲ್ಲಿ ಹುಟ್ಟುವ ಹೆಣ್ಣು ಮಕ್ಕಳಿಗೆ ಪುರುಷರಂತೆ ಎಲ್ಲ ರೀತಿಯ ಗೌರವ ನೀಡಲಾಗುತ್ತಿದೆ.
ಇದೀಗ ರಾಜಸ್ಥಾನದ ನಾಗೌರ್ದಲ್ಲಿನ ರೈತರ ಮನೆಯಲ್ಲಿ ಬರೋಬ್ಬರಿ 35 ವರ್ಷದ ಬಳಿಕ ಹೆಣ್ಣು ಮಗುವಿನ ಜನನವಾಗಿದೆ. ಹೀಗಾಗಿ ಆ ಮಗುವನ್ನ ಆಸ್ಪತ್ರೆಯಿಂದ ಮನೆಗೆ ಕರೆತರಲು ಬರೋಬ್ಬರಿ 4.5 ಲಕ್ಷ ರೂ. ನೀಡಿ ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ. ನಾಗೌರ್ದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿತ್ತು. ಇದಾದ ಬಳಿಕ ನಿಂಬ್ಡಿ ಚಂದವಟಾ ಗ್ರಾಮಕ್ಕೆ ಮಗುವನ್ನ ತೆಗೆದುಕೊಂಡು ಹೋಗಲಾಗಿತ್ತು. ನಿನ್ನೆ ತಾಯಿ ಮನೆಯಿಂದ ಮಗುವಿನ ತಂದೆ ಮನೆಗೆ ಹೋಗಿದ್ದು, ಅದನ್ನು ಹೆಲಿಕಾಪ್ಟರ್ ಮೂಲಕ ಕರೆದುಕೊಂಡು ಹೋಗಲಾಗಿದೆ.
ರೈತ ಕುಟುಂಬವಾಗಿರುವ ಮದನ್ ಲಾಲ್ ಕುಮಾರ್ ಮನೆಯಲ್ಲಿ ಕಳೆದ 35 ವರ್ಷಗಳಿಂದ ಹೆಣ್ಣು ಮಗುವಿನ ಜನನವಾಗಿರಲಿಲ್ಲ. ಆದರೆ, ಇದೀಗ ಹೆಣ್ಣು ಮಗುವಿನ ಜನನವಾಗಿದ್ದು, ಅಲ್ಲಿನ ಜಿಲ್ಲಾಧಿಕಾರಿ ಅನುಮತಿ ಪಡೆದುಕೊಂಡು ಇಷ್ಟೊಂದು ಅದ್ಧೂರಿಯಾಗಿ ಮಗುವಿನ ಸ್ವಾಗತ ಮಾಡಿಕೊಂಡಿದ್ದಾರೆ.