ನವದೆಹಲಿ: 291 ಜನರ ಸಾವಿಗೆ ಕಾರಣವಾದ ಒಡಿಶಾದ ಬಾಲಾಸೋರ್ ತ್ರಿವಳಿ ರೈಲು ದುರಂತದ ಬಗ್ಗೆ ಸಿಬಿಐ ತನಿಖೆ ಮುಂದುವರಿಸಿದ್ದು, ಇದೇ ವೇಳೆ ಆಗ್ನೇಯ ರೈಲ್ವೆಯ ಜನರಲ್ ಮ್ಯಾನೇಜರ್ ಅರ್ಚನಾ ಜೋಶಿ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ದುರಂತ ಸಂಭವಿಸಿ 1 ತಿಂಗಳ ನಂತರ ಈ ಕ್ರಮ ಜರುಗಿಸಲಾಗಿದೆ. ಇವರ ಜಾಗಕ್ಕೆ ಅನಿಲ್ ಕುಮಾರ್ ಮಿಶ್ರಾ ಅವರಿಗೆ ಅಧಿಕಾರದ ಹೊಣೆ ನೀಡಲಾಗಿದೆ.
ತ್ರಿವಳಿ ರೈಲು ದುರಂತ ದೇಶವನ್ನೇ ನಡುಗಿಸಿತ್ತು. ಇದು ರಾಜಕೀಯ ಸ್ವರೂಪ ಪಡೆದು ನಾಯಕರ ಕಿತ್ತಾಟಕ್ಕೂ ಕಾರಣವಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆಯಲು ಕಾರಣ ಎಂದು ಅನುಮಾನಿಸಲಾಗಿದೆ. ಹೀಗಾಗಿ ಸದ್ಯ ಆಗ್ನೇಯ ರೈಲ್ವೆಯ ಜನರಲ್ ಮ್ಯಾನೇಜರ್ ಅರ್ಚನಾ ಜೋಶಿ ಅವರ ತಲೆದಂಡವಾಗಿದೆ. ಹೊಸ ಮ್ಯಾನೇಜರ್ ಆಗಿ ಅನಿಲ್ ಕುಮಾರ್ ಮಿಶ್ರಾ ಅವರನ್ನು ಸಂಪುಟದ ನೇಮಿಸಲಾಗಿದೆ ಎಂದು ಭಾರತೀಯ ರೈಲ್ವೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ತಿಂಗಳಾದರೂ ಮುಗಿಯದ ಶವ ಪತ್ತೆ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಟ್ರಿಪಲ್ ರೈಲು ಡಿಕ್ಕಿಯಾದ ನಂತರ ಭುವನೇಶ್ವರದಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಲ್ಲಿ ಶವ ಪತ್ತೆ ಕಾರ್ಯ ಇನ್ನೂ ಮುಗಿದಿಲ್ಲ. ಭುವನೇಶ್ವರದ ಏಮ್ಸ್ನ ಆಸ್ಪತ್ರೆಯಲ್ಲಿ 81 ಶವಗಳು ಬಾಕಿ ಉಳಿದುಕೊಂಡಿವೆ. ಒಂದೇ ದೇಹಕ್ಕಾಗಿ ಬಹು ಜನರು ಕ್ಲೈಮ್ ಸಲ್ಲಿಸುವತ್ತಿರುವ ಕಾರಣದಿಂದ ನಾವು ಅವರ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಡಿಎನ್‌ಎ ಪರೀಕ್ಷೆಯಲ್ಲಿ 29 ಮಾದರಿಗಳ ತಪಾಸಣೆಯ ಬಳಿಕ ದೃಢೀಕರಣವನ್ನು ಪಡೆಯಲಾಗಿದೆ. ಅವರ ಸಂಬಂಧಿಕರು / ಹಕ್ಕುದಾರರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಸುಲೋಚನಾ ದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತ್ರಿವಳಿ ರೈಲು ದುರಂತದ ಕಹಿ ನೆನಪು: ಜೂನ್ 2ರಂದು ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬಾಲಸೋರ್ ಜಿಲ್ಲೆಯ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿತ್ತು. ಇದರಿಂದ ಇನ್ನೊಂದು ಲೈನ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರ ರಭಸಕ್ಕೆ ಗೂಡ್ಸ್ ಮತ್ತು ಕೋರಮಂಡಲ್ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿವೆ. ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಬೆಂಗಳೂರಿನ ಯಶವಂತಪುರದಿಂದ ಬಂದಿದ್ದು, ಹೌರಾ ಎಕ್ಸ್‌ಪ್ರೆಸ್ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿದೆ. ಇದರಿಂದ ಭೀಕರತೆ ಉಂಟಾಗಿತ್ತು. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ ಈವರೆಗೆ 275 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಮ್ ಸಮಸ್ಯೆಯಿಂದ ರೈಲು ದುರಂತ ಸಂಭವಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು. ದುರಂತದ ಬಗ್ಗೆ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಸಿಬಿಐ ತಂಡ ಹಲವು ರೈಲ್ವೆ ಸಿಬ್ಬಂದಿ, ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ತ್ರಿವಳಿ ರೈಲು ಅಪಘಾತದಿಂದ ಹಾನಿಗೊಳಗಾದ ಹಳಿಗಳನ್ನು ಅಪಘಾತ ಸಂಭವಿಸಿದ 51 ಗಂಟೆಗಳಲ್ಲಿ ಮರುಜೋಡಣೆ ಮಾಡಿ, ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಇದನ್ನೂ ಓದಿ: Goods Trains collided: ಪಶ್ಚಿಮ ಬಂಗಾಳದಲ್ಲಿ ಗೂಡ್ಸ್ ರೈಲುಗಳು ಡಿಕ್ಕಿ, ಬೋಗಿಗಳು ಚೆಲ್ಲಾಪಿಲ್ಲಿ