ಮುಂಬೈ (ಮಹಾರಾಷ್ಟ್ರ): ಮಹತ್ವದ ಬೆಳವಣಿಗೆಯೊಂದರಲ್ಲಿ ಎನ್‌ಸಿಪಿ ಅಧ್ಯಕ್ಷ, ಹಿರಿಯ ರಾಜಕಾರಣಿ ಶರದ್ ಪವಾರ್ ಅವರನ್ನು ಖ್ಯಾತಿ ಉದ್ಯಮಿ ಗೌತಮ್ ಅದಾನಿ ಭೇಟಿ ಮಾಡಿದ್ದಾರೆ. ಇಂದು ಬೆಳಗ್ಗೆ ದಕ್ಷಿಣ ಮುಂಬೈನಲ್ಲಿರುವ ಪವಾರ್ ಅವರ ನಿವಾಸ ಸಿಲ್ವರ್ ಓಕ್‌ಗೆ ಅದಾನಿ ತೆರಳಿದ್ದರು. ಉಭಯ ನಾಯಕರ ನಡುವೆ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಶೈಕ್ಷಣಿಕ ಅರ್ಹತೆ ರಾಷ್ಟ್ರೀಯ ವಿಷಯವಲ್ಲ: ಶರದ್ ಪವಾರ್
ಇತ್ತೀಚೆಗೆ ಅದಾನಿ ಸಂಪತ್ತು ಮತ್ತು ಹಿಂಡೆನ್‌ಬರ್ಗ್ ವರದಿ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಕಾಂಗ್ರೆಸ್ ನೇತೃತ್ವದಲ್ಲಿ ಎನ್‌ಸಿಪಿ ಸೇರಿ ಸುಮಾರು 20 ಪಕ್ಷಗಳು ಆಡಳಿತಾರೂಢ ಬಿಜೆಪಿ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದವು. ಇದರ ನಡುವೆ ಕಳೆದ ತಿಂಗಳು ಅದಾನಿ ಬಗ್ಗೆ ಶರದ್ ಪವಾರ್ ಮೃದವಾದ ಮಾತುಗಳನ್ನಾಡಿದ್ದರು. ಇದೀಗ ಖುದ್ದು ಅದಾನಿ ಅವರೇ ಎನ್‌ಸಿಪಿ ಮುಖ್ಯಸ್ಥರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಹೊಸ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದೆಡೆ, ಮುಂಬರುವ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಇದರ ಭಾಗವಾಗಿ ಹಲವು ಸಮಾನ ಮನಸ್ಕ ಪಕ್ಷಗಳೊಂದಿಗೆ ನಿರಂತರವಾಗಿ ಮಾತುಕತೆಗಳನ್ನು ನಡೆಸುತ್ತಿದೆ. ಕೆಲ ದಿನಗಳ ಹಿಂದೆಯೂ ಶರದ್ ಪವಾರ್ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಮಾಲೋಚನೆ ನಡೆಸಿದ್ದರು.
ಇದೀಗ ಶರದ್ ಪವಾರ್ ಅವರನ್ನು ಉದ್ಯಮಿ ಅದಾನಿ ಭೇಟಿ ಮಾಡಿರುವುದು ಹೆಚ್ಚಿನ ಚರ್ಚೆಗೆ ಗ್ರಾಸ ಒದಗಿಸಿದೆ. ಇಬ್ಬರ ನಡುವೆ ಯಾವೆಲ್ಲ ಮಾತುಕತೆ ನಡೆಯಿತು ಎಂಬ ವಿಚಾರ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಇದನ್ನೂ ಓದಿ: ಹಿಂಡನ್ಬರ್ಗ್ ವರದಿ "ಉದ್ದೇಶಪೂರ್ವಕ": ಕಾಂಗ್ರೆಸ್ ಮಿತ್ರಪಕ್ಷ ನಾಯಕನ ಅಚ್ಚರಿಯ ಹೇಳಿಕೆ