ನವದೆಹಲಿ : ಪ್ರಗತಿಪರ ಚಿಂತಕಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವನ ಜಾಮೀನು ಅರ್ಜಿಯನ್ನ ಯಾವುದೇ ಪ್ರಭಾವಕ್ಕೊಳಗಾಗದಂತೆ ನಿರ್ಧರಿಸಿ ಎಂದು ಸೂಚನೆ ನೀಡಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯೋರ್ವನ ವಿರುದ್ಧ ದಾಖಲಾಗಿದ್ದ ಆರೋಪಗಳನ್ನ ರದ್ದುಗೊಳಿಸಿದ್ದ ಹೈಕೋರ್ಟ್ನ ಆದೇಶ ಪ್ರಶ್ನೆ ಮಾಡಿ ಗೌರಿ ಲಂಕೇಶ್ ಸೋದರಿ ಕವಿತಾ ಲಂಕೇಶ್ ಅವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಇದೀಗ ಮಹತ್ವದ ನಿರ್ದೇಶನ ನೀಡಿದೆ.
ಗೌರಿ ಲಂಕೇಶ್ ಪ್ರಕರಣದ ಪ್ರಮುಖ ಆರೋಪಿ ಮೋಹನ್ ನಾಯಕ್ ಎಂಬಾತನ ವಿರುದ್ಧ ದಾಖಲಾಗಿದ್ದ ಕೆಲ ಪ್ರಕರಣಗಳನ್ನ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಕೈಬಿಡಲಾಗಿತ್ತು. ಇದನ್ನ ಪ್ರಶ್ನೆ ಮಾಡಿ ಕವಿತಾ ಲಂಕೇಶ್ ಅವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಸುಪ್ರೀಂಕೋರ್ಟ್ನ ಎ ಎಂ ಖನ್ವಿಲ್ಕರ್ ನೇತೃತ್ವದ ಪೀಠವು ವಿಚಾರಣೆ ನಡೆಸಿ ಇದೀಗ ನೋಟಿಸ್ ಜಾರಿ ಮಾಡಿದೆ. ಜತೆಗೆ ಮೋಹನ್ ನಾಯಕ್ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿರ್ಧರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇದನ್ನೂ ಓದಿರಿ: ಉತ್ತರಾಖಂಡಕ್ಕೆ ನೂತನ ಸಿಎಂ: ಪುಷ್ಕರ್ ಸಿಂಗ್ ಧಮಿಗೆ ಸಾರಥ್ಯ
ಮೋಹನ್ ನಾಯಕ್ ಮೇಲೆ ಹಾಕಲಾಗಿದ್ದ ಆರೋಪಗಳನ್ನ ಏಪ್ರಿಲ್ 22ರಂದು ಹೈಕೋರ್ಟ್ ರದ್ಧುಗೊಳಿಸಿತ್ತು. ಸದ್ಯ ಮುಂದಿನ ವಿಚಾರಣೆಯನ್ನ ಜುಲೈ 15ಕ್ಕೆ ಮುಂದೂಡಿಕೆ ಮಾಡಲಾಗಿದೆ. 2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿತ್ತು.