ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಅಂಗಸಂಸ್ಥೆಯೊಂದು ''ಗರ್ಭ ಸಂಸ್ಕಾರ'' ಎಂಬ ಅಭಿಯಾನ ಪ್ರಾರಂಭಿಸಲು ಮುಂದಾಗಿದೆ. ''ಸಂಸ್ಕೃತಿ ಮತ್ತು ದೇಶಭಕ್ತ" ಶಿಶುಗಳ ಜನನಕ್ಕಾಗಿ ಈ ಅಭಿಯಾನದ ಅಡಿಯಲ್ಲಿ ಗರ್ಭಿಣಿಯರಿಗೆ ಭಗವದ್ಗೀತೆ ಮತ್ತು ರಾಮಾಯಣದಂತಹ ಧಾರ್ಮಿಕ ಗ್ರಂಥಗಳನ್ನು ಓದಲು ಹಾಗೂ ಸಂಸ್ಕೃತ ಮಂತ್ರಗಳನ್ನು ಪಠಿಸಲು ಮತ್ತು ಯೋಗಾಭ್ಯಾಸ ಮಾಡಲು ಪ್ರೋತ್ಸಾಹಿಸಲಾಗುವುದು ಎಂದು ಸಂವರ್ಧಿನಿ ನ್ಯಾಸ್ ಸಂಸ್ಥೆ ತಿಳಿಸಿದೆ.
"ಗರ್ಭ ಸಂಸ್ಕಾರ'' ಕಾರ್ಯಕ್ರಮವನ್ನು ಗರ್ಭಾವಸ್ಥೆಯ ಕಡೆಗೆ ಸಮಗ್ರ ಮತ್ತು ವೈಜ್ಞಾನಿಕ ವಿಧಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಗರ್ಭಾವಸ್ಥೆಯಿಂದ ಹೆರಿಗೆಯವರೆಗೆ ಶಿಶುಗಳು ಗರ್ಭದಲ್ಲಿ ಸಂಸ್ಕಾರವನ್ನು (ಸಂಸ್ಕೃತಿ ಮತ್ತು ಮೌಲ್ಯಗಳು) ಕಲಿಯುವುದನ್ನು ಖಚಿತಪಡಿಸಿಕೊಳ್ಳಲು ಅಭಿಯಾನದ ಉದ್ದೇಶ. ಈ ಪ್ರಕ್ರಿಯೆಯು ಎರಡು ವರ್ಷವನ್ನು ತಲುಪುವವರೆಗೆ ಮುಂದುವರಿಯುತ್ತದೆ ಎಂದು ಸಂವರ್ಧಿನಿ ನ್ಯಾಸ್ ಕಾರ್ಯಕಾರಿ ಸದಸ್ಯರೊಬ್ಬರು ಶನಿವಾರ ತಿಳಿಸಿದ್ದಾರೆ.
ಆರ್ಎಸ್ಎಸ್ಗೆ ಸಮಾನಾಂತರವಾಗಿರುವ ಮಹಿಳಾ ಸಂಘಟನೆಯಾದ ರಾಷ್ಟ್ರ ಸೇವಿಕಾ ಸಂಘದ ಸಂವರ್ಧಿನಿ ನ್ಯಾಸ್ ವಿಭಾಗದೊಂದಿಗೆ ನಂಟು ಹೊಂದಿರುವ ವೈದ್ಯರು ಈ ಕಾರ್ಯಕ್ರಮವನ್ನು ದೇಶಾದ್ಯಂತ ಜಾರಿಗೊಳಿಸಲಿದ್ದಾರೆ. ತಾಯಂದಿರು ಮತ್ತು ಅವರ ಕುಟುಂಬಗಳಿಗೆ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು, ಉತ್ತಮ ಪರಿಸರ ಮತ್ತು ವಾತಾವರಣವನ್ನು ಒದಗಿಸುವುದು ಸೇರಿದಂತೆ ಉತ್ತಮ ಮಗುವನ್ನು ಹೊಂದುವ ವಿವಿಧ ಅಂಶಗಳ ಕುರಿತು ಮಾರ್ಗದರ್ಶನ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರತಿ 10 ವೈದ್ಯರ ತಂಡ: ಇದಕ್ಕಾಗಿ ನಾವು ದೇಶದ ಐದು ಪ್ರಮುಖ ವಿಭಾಗಗಳಿಗೆ ಪ್ರತಿ 10 ವೈದ್ಯರ ತಂಡವನ್ನು ರಚಿಸಲಾಗಿದೆ. ಇದೇ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಿದೆ. ಈ ಪ್ರತಿಯೊಬ್ಬ ವೈದ್ಯರು ತಮ್ಮ ಪ್ರದೇಶಗಳಲ್ಲಿ 20 ಮಹಿಳೆಯರು ತೆಗೆದುಕೊಳ್ಳುವ ಮೂಲಕ ಪ್ರಾರಂಭಿಸುತ್ತಾರೆ. ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಮತ್ತು ಇತರ ಗಣ್ಯರು ಉಪಸ್ಥಿತರಿರುತ್ತಾರೆ ಎಂದು ವಿವರಿಸಿದ್ದಾರೆ.
''ಗರ್ಭ ಸಂಸ್ಕಾರ'' ಕಾರ್ಯಕ್ರಮದ ಅನುಷ್ಠಾನದ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಗಾಗಿ ಸಂವರ್ಧಿನಿ ನ್ಯಾಸ್‌ನ ಎಂಟು ಸದಸ್ಯರ ಕೇಂದ್ರ ತಂಡವನ್ನು ರಚಿಸಲಾಗಿದೆ. ಈ ಕೇಂದ್ರ ತಂಡವು ಆಯುರ್ವೇದ, ಹೋಮಿಯೋಪತಿ ಮತ್ತು ಅಲೋಪತಿ ವೈದ್ಯರು ಮತ್ತು ವಿಷಯ ತಜ್ಞರನ್ನು ಒಳಗೊಂಡಿದೆ. ಹುಟ್ಟುವ ಪ್ರತಿ ಮಗು ಗಂಡಾಗಿರಲಿ, ಹೆಣ್ಣಾಗಿರಲಿ, ಒಳ್ಳೆಯ ಸಂಸ್ಕಾರ, ಒಳ್ಳೆಯ ಆಲೋಚನೆಗಳೊಂದಿಗೆ ಬರಬೇಕು ಮತ್ತು ದೇಶಭಕ್ತರಾಗಬೇಕು. ನಮ್ಮ ಮುಂದಿನ ಪೀಳಿಗೆಗಳು ಸೇವಾ ಭಾವನೆ, ಮಹಿಳೆಯರಿಗೆ ಗೌರವ, ಮೌಲ್ಯಗಳು ಮತ್ತು ಸಂಸ್ಕೃತಿಯೊಂದಿಗೆ ಬೆಳೆಯಬೇಕು. ಭಾರತ ನಿರ್ಮಾಣದಲ್ಲಿ ''ಗರ್ಭ ಸಂಸ್ಕಾರ'' ಕಾರ್ಯಕ್ರಮವು ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಡಿಯಲ್ಲಿ ಗರ್ಭಿಣಿಯರಿಗೆ ಸಂಸ್ಕೃತದಲ್ಲಿ ಕೆಲವು ಮಂತ್ರಗಳನ್ನು ಪಠಿಸಲು ಮತ್ತು ಭಗವದ್ಗೀತೆ, ರಾಮಾಯಣ ಮತ್ತು ಇತರ ಧಾರ್ಮಿಕ ಗ್ರಂಥಗಳನ್ನು ಓದಲು ಪ್ರೋತ್ಸಾಹಿಸಲಾಗುವುದು. ಪೋಷಕರು ಸಂಸ್ಕೃತ ಮಂತ್ರಗಳ ಪಠಣ ಮತ್ತು ಭಗವದ್ಗೀತೆಯನ್ನು ಓದುವುದರಿಂದ ಗರ್ಭಾಶಯದಲ್ಲಿನ ಶಿಶುಗಳ ಮೆದುಳಿನ ಬೆಳವಣಿಗೆ ಮತ್ತು ಬೆಳವಣಿಗೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಅದು ಅವರ ಜನನದ ನಂತರ ಮುಂದುವರಿಯುತ್ತದೆ. ಸಂಸ್ಕೃತ ಶ್ಲೋಕಗಳ ಪಠಣದೊಂದಿಗೆ ಹೊಟ್ಟೆಯಲ್ಲಿರುವ ಮಗುವಿಗೆ ಧನಾತ್ಮಕ ಕಂಪನಗಳು ತಲುಪುತ್ತವೆ ಎಂದು ವಿವರಿಸಿದ್ದಾರೆ.
ಗರ್ಭದಲ್ಲಿರುವ ಮಗುವಿನೊಂದಿಗೆ ಸಂವಹನ ನಡೆಸಲು ಪೋಷಕರಿಗೆ ಮಾರ್ಗದರ್ಶನ ನೀಡಲಾಗುವುದು. ಗರ್ಭದಲ್ಲಿ ನಾಲ್ಕು ತಿಂಗಳ ನಂತರ ಮಗು ಕೇಳಲು ಪ್ರಾರಂಭಿಸುತ್ತದೆ. ಇದು ವಿಜ್ಞಾನದಿಂದ ಸಾಬೀತಾಗಿದೆ. ಆದ್ದರಿಂದ ಪೋಷಕರು ಒಂದು ನಿರ್ದಿಷ್ಟ ಸಮಯದಲ್ಲಿ ಗರ್ಭದಲ್ಲಿರುವ ಮಗುವಿನೊಂದಿಗೆ ಮಾತನಾಡುತ್ತಾರೆ. ಕುಟುಂಬ ಸದಸ್ಯರು, ಭಾರತ, ರಾಜ್ಯ ಹಾಗೂ ಮಹಾನ್ ವ್ಯಕ್ತಿಗಳ ಕಥೆಗಳ ಬಗ್ಗೆ ಮಗುವಿಗೆ ತಿಳಿಸುತ್ತಾರೆ. ಸಾಮಾನ್ಯ ಹೆರಿಗೆ ಆಗಲು ಗರ್ಭಿಣಿಯರಿಗೆ ಯೋಗಾಭ್ಯಾಸದ ಮಾಹಿತಿಯನ್ನೂ ಒದಗಿಸಲಾಗುವುದು ಎಂದು ಕಾರ್ಯಕಾರಿ ಸದಸ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: JP Nadda.. ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ.. ವಿಡಿಯೋ