ಧಾರ್(ಮಧ್ಯಪ್ರದೇಶ): ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬೈಕ್ ಮೇಲೆ ಗಂಡನೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ವಿವಾಹಿತೆಯ ಮೇಲೆ ಮೂವರು ದುಷ್ಕರ್ಮಿಗಳು ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಧಾರ್ನಲ್ಲಿ ನಡೆದಿದೆ. ಜಿಲ್ಲೆಯ ಮನವಾರ್ ಬಳಿ ಅಪರಿಚಿತರು ಬೈಕ್ ನಿಲ್ಲಿಸಿದ್ದು, ಈ ವೇಳೆ ಆಕೆಯ ಪತಿಯನ್ನ ಮರಕ್ಕೆ ಕಟ್ಟಿ ಹಾಕಿದ್ದು, ಮಹಿಳೆಯ ಬಟ್ಟೆ ಬಿಚ್ಚಿ ಕ್ರೂರವಾಗಿ ನಡೆದುಕೊಂಡಿದ್ದಾರೆ.
ಘಟನೆಯ ಸಂಪೂರ್ಣ ವಿವರ
ಜಜಮಖೇಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬೈಕ್ ಮೇಲೆ ಗಂಡನೊಂದಿಗೆ ವಾಪಸ್ ಬರುತ್ತಿದ್ದಾಗ ಬೈಕ್ ಮೇಲೆ ಬಂದಿರುವ ಮೂವರು ಕಾಮುಕರು ದಂಪತಿಯನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪರ್ಸ್, ಮಂಗಳಸೂತ್ರ ಸೇರಿದಂತೆ ಕೆಲ ಒಡವೆ ದೋಚಿದ್ದಾರೆ. ಇದಾದ ಬಳಿಕ ಅವರು ಮಹಿಳೆಯ ಬಟ್ಟೆ ಹರಿದು ಹಾಕಿದ್ದು, ಅತ್ಯಾಚಾರ ಮಾಡಿದ್ದಾರೆ. ಮಹಿಳೆಯ ಗುಪ್ತಾಂಗದಲ್ಲಿ ರಕ್ತಸ್ರಾವ ಆಗಲು ಶುರುವಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾರೆ.
ಸ್ಥಳದಿಂದ ಪರಾರಿಯಾಗುವುದಕ್ಕೂ ಮುಂಚಿತವಾಗಿ ದಂಪತಿ ತಲೆಗೂ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಶನಿವಾರ ರಾತ್ರಿ 7:30ರ ವೇಳೆ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಂಪತಿಗಳಿಬ್ಬರೂ ಅದೇ ಸ್ಥಿತಿಯಲ್ಲಿ ಸಿವಿಲ್ ಆಸ್ಪತ್ರೆಗೆ ತೆರಳಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ನಂತರ ಧಾರ್ನ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ಮುಂದುವರೆದಿದ್ದು, ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದಾಳೆಂದು ತಿಳಿದುಬಂದಿದೆ.
ಇದನ್ನೂ ಓದಿರಿ: 2021ರ ಏಳು-ಬೀಳು: ಸಿಹಿ ನೆನಪುಗಳ ಜೊತೆಗೆ ಕಹಿ ಘಟನೆ.. ಪ್ರಮುಖ ಘಟನಾವಳಿಗಳ ಹಿನ್ನೋಟ
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಸೆಕ್ಷನ್ 294, 323, 373 ಮತ್ತು 376-ಡಿ ಹಾಗೂ 394 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.