ಗಾಂಧಿನಗರ (ಗುಜರಾತ್): ಗಾಂಧಿನಗರದ ಪೆಥಾಪುರದ ಸ್ವಾಮಿನಾರಾಯಣ ದೇವಸ್ಥಾನದ ಗೇಟ್ ಬಳಿ 10 ತಿಂಗಳ ಗಂಡು ಮಗು ಪತ್ತೆಯಾದ ಪ್ರಕರಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಮಗುವಿನ ತಂದೆಯನ್ನೇ ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಹಿನ್ನೆಲೆ?
ಅಕ್ಟೋಬರ್ 6ರ ರಾತ್ರಿ ಗಾಂಧಿನಗರದ ಪೆಥಾಪುರದ ಸ್ವಾಮಿನಾರಾಯಣ ದೇವಸ್ಥಾನದ ಗೇಟ್ ಬಳಿ ಪುಟ್ಟ ಮಗುವೊಂದು ಅಳುತ್ತಾ ಕುಳಿತಿತ್ತು. ಮಗು ಅಳುವ ಶಬ್ಧ ಕೇಳಿದ ದೇವಸ್ಥಾನದ ಗೋಶಾಲಾ ಸಿಬ್ಬಂದಿಯೊಬ್ಬರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಮಗುವನ್ನು ರಕ್ಷಿಸಿದ ಪೊಲೀಸರು ಪೋಷಕರಿಗಾಗಿ ಹುಡುಕಾಟ ಆರಂಭಿಸಿದ್ದರು. ಇದಕ್ಕಾಗಿ 8 ತಂಡಗಳನ್ನು ರಚಿಸಲಾಯಿತು. ಅಹಮದಾಬಾದ್ ಕ್ರೈಂ ಬ್ರ್ಯಾಂಚ್ ಕೂಡ ಗಾಂಧಿನಗರ ಪೊಲೀಸರೊಂದಿಗೆ ಕೈ ಜೋಡಿಸಿದರು. ಮಗುವಿನ ಪೋಷಕರನ್ನು ಪತ್ತೆ ಮಾಡಲು ಅನುಕೂಲವಾಗಬಹುದೆಂದು 'ಈಟಿವಿ ಭಾರತ'ದಲ್ಲಿಯೂ ಮಗುವಿನ ಫೋಟೋ ಪ್ರಕಟಿಸಲಾಗಿತ್ತು.
ಗಾಂಧಿನಗರದ ಸಿವಿಲ್ ಆಸ್ಪತ್ರೆಯಲ್ಲಿ ಮಗುವನ್ನು ಇರಿಸಿ ಆರೈಕೆ ಮಾಡಲಾಗುತ್ತಿದೆ. ಮಗುವಿನ ನಗುವನ್ನ ಕಂಡ ಆಸ್ಪತ್ರೆ ಸಿಬ್ಬಂದಿ ಅದಕ್ಕೆ 'ಸ್ಮಿತ್' (SMILE ಎಂದರ್ಥ) ಎಂದು ಹೆಸರಿಟ್ಟಿದ್ದಾರೆ. ಮಗು ಆರೋಗ್ಯವಾಗಿದೆ, ಅದರ ದೇಹದಲ್ಲಿ ಯಾವುದೇ ಗಾಯ ಕಂಡುಬಂದಿಲ್ಲ ಎಂದು ಪಿಡಿಯಾಟ್ರಿಕ್ ವಿಭಾಗದ ಮುಖ್ಯಸ್ಥೆ ಡಾ. ಏಕತಾ ದಲಾಲ್ ಹೇಳಿದ್ದಾರೆ.
ರಾಜ್ಯ ಗೃಹ ಸಚಿವ ಹರ್ಷ ಸಾಂಘವಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ, ಮಗುವನ್ನು ನೋಡಿದ್ದಾರೆ. ಬಳಿಕ ಮಾತನಾಡಿದ್ದ ಅವರು, ಗುಜರಾತ್ ಮುಖ್ಯಮಂತ್ರಿ ಸಹ ಮಗುವಿನ ಬಗ್ಗೆ ವಿಚಾರಿಸಿದ್ದು, ಪೋಷಕರ ಪತ್ತೆಗಾಗಿ ತನಿಖೆ ಚುರುಕುಗೊಳಿಸಲು ಸೂಚನೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದರು.
ತಂದೆಯೇ ಆರೋಪಿ..
ತನಿಖೆ ಆರಂಭಿಸಿದ ಪೊಲೀಸರಿಗೆ, ಮಗುವನ್ನು ದೇವಸ್ಥಾನದ ಗೇಟ್ ಬಳಿ ಕಾರಿನಲ್ಲಿ ತಂದು ಬಿಟ್ಟ ಸಿಸಿಟಿವಿ ದೃಶ್ಯಾವಳಿ ಸಿಕ್ಕಿತ್ತು. ಇದನ್ನಾಧರಿಸಿ ಕಾರು ಮಾಲೀಕನ ಪತ್ತೆಗೆ ತನಿಖೆ ಚುರುಕುಗೊಳಿಸಿ, 24 ಗಂಟೆಗಳಲ್ಲಿ ಆತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು. ಇದಕ್ಕಾಗಿ 40 ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ಇದೀಗ ಆ ಕಾರು ಮಾಲೀಕ ಬೇರಾರು ಅಲ್ಲ, ಮಗುವಿನ ತಂದೆ ಸಚಿನ್ ದೀಕ್ಷಿತ್ ಎಂಬುದು ತಿಳಿದು ಬಂದಿದೆ. ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಸಚಿನ್ ದೀಕ್ಷಿತ್ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಸಂಗಾತಿಯ ಕೊಲೆ..
ವಿಚಾರಣೆ ವೇಳೆ ಆತನ ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಹೀನಾ ಎಂಬ ಯುವತಿ ಹಾಗೂ ಸಚಿನ್ ದೀಕ್ಷಿತ್ 2018ರಿಂದ ಲಿವಿಂಗ್ ಟುಗೆದರ್ನಲ್ಲಿದ್ದು, ಗುಜರಾತ್ನ ವಡೋದರಾದಲ್ಲಿ ಫ್ಲಾಟ್ ಒಂದರಲ್ಲಿ ವಾಸವಾಗಿದ್ದರು. 2020ರ ಡಿಸೆಂಬರ್ನಲ್ಲಿ ಇವರಿಗೆ ಗಂಡು ಮಗು ಜನಿಸಿತ್ತು. ಉತ್ತರ ಪ್ರದೇಶದಲ್ಲಿ ಸಚಿನ್ ಕುಟುಂಬ ವಾಸವಾಗಿದ್ದು, ಆಗಾಗ ಆತ ಯುಪಿಗೆ ಹೋಗುತ್ತಿದ್ದನು. ಆದರೆ ಹೀನಾ ತನ್ನೊಂದಿಗೆ ಇಲ್ಲಿಯೇ ಇರಬೇಕೆಂದು ಒತ್ತಾಯಿಸಿದ್ದಾಳೆ.
ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದ್ದು, ಕೋಪದಲ್ಲಿ ಹೀನಾಳನ್ನು ಕತ್ತು ಹಿಸುಕಿ ಸಚಿನ್ ಸಾಯಿಸಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಚೀಲದಲ್ಲಿ ತುಂಬಿಸಿ ಅದನ್ನು ಅಡುಗೆಮನೆಯಲ್ಲಿಟ್ಟು, ಮಗುವಿನೊಂದಿಗೆ ಫ್ಲಾಟ್ನಿಂದ ಹೊರ ಬಂದಿದ್ದಾನೆ. ಮಗುವನ್ನು ಗಾಂಧಿನಗರದ ಪೆಥಾಪುರದ ಸ್ವಾಮಿನಾರಾಯಣ ದೇವಸ್ಥಾನದ ಗೇಟ್ ಬಳಿ ಬಿಟ್ಟು ಪರಾರಿಯಾಗಿದ್ದ.