ನವದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್ನಲ್ಲಿ ಮತ್ತೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕತ್ವದ ಬಗ್ಗೆ ಅದೇ ಪಕ್ಷದ ಭಿನ್ನಮತೀಯ ಹಿರಿಯ ನಾಯಕರು ಪ್ರಶ್ನೆ ಎತ್ತುತ್ತಿದ್ದರೆ, ಗಾಂಧಿ ಕುಟುಂಬದ ಆಪ್ತರು ನಾಯಕತ್ವವನ್ನು ಬಲವಾಗಿ ಸಮರ್ಥಿಕೊಳ್ಳುತ್ತಿದ್ದಾರೆ. ಇದರಿಂದ ಪಕ್ಷದ ಪ್ರಮುಖ ನಾಯಕರ ನಡುವೆಯೇ ಒಂದು ರೀತಿಯಲ್ಲಿ ಮಾತಿನ ದಾಳಿ-ಪ್ರತಿ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹೌದು, ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ರಾಜಕೀಯವಾಗಿ ತುಂಬಾ ಕ್ಷೀಣಿಸುತ್ತಿದೆ. ಅನೇಕ ಚುನಾವಣೆಗಳಲ್ಲಿ ಸಾಲು-ಸಾಲು ಸೋಲುಗಳನ್ನು ಅನುಭವಿಸುತ್ತಲೇ ಇದೆ. ಇದೀಗ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗಿಬಿಟ್ಟಿದೆ. ಅದರಲ್ಲೂ ಪಂಜಾಬ್ನಲ್ಲಿ ಇದ್ದ ಅಧಿಕಾರವನ್ನು ಉಳಿಸಿಕೊಳ್ಳುವಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಗೋವಾದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿತ್ತು. ಆದರೆ, ಅಲ್ಲೂ ಕೂಡ ಕಾಂಗ್ರೆಸ್ ವಿಫಲವಾಗಿ ಬಿಟ್ಟಿದೆ. ಹೀಗಾಗಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿ ಬಿಟ್ಟಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಕಿಡಿ ಹೊತ್ತಿಸಿದ ಕಪಿಲ್ ಸಿಬಲ್ ಹೇಳಿಕೆ: ಈ ನಡುವೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಕಪಿಲ್ ಸಿಬಲ್, ಆನಂದ ಶರ್ಮಾ, ಗುಲಾಂ ನಬಿ ಆಜಾದ್ ಸೇರಿದಂತೆ 23 ಜನ ಭಿನ್ನಮತೀಯ ನಾಯಕರು ಮತ್ತೆ ಸಿಡಿದೆದ್ದಿದ್ದಾರೆ. ಗಾಂಧಿ ಕುಟುಂಬ ಕಾಂಗ್ರೆಸ್ ಪಕ್ಷದ ನಾಯಕತ್ವದಿಂದ ಕೆಳಗಿಯಬೇಕು ಮತ್ತು ಮತ್ತೊಬ್ಬರಿಗೆ ಅವಕಾಶ ಕೊಡಬೇಕೆಂದು ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ.
ಈ ಹೇಳಿಕೆಗೆ ಕಾಂಗ್ರೆಸ್ನ ಇತರೆ ನಾಯಕರು ಅಸಮಾಧಾನ ಹೊರಹಾಕಿ ಸಿಬಲ್ ವಿರುದ್ಧ ಮುಗಿಬಿದ್ದಿದ್ದಾರೆ. ಯಾರು ಚುನಾವಣೆಯನ್ನೇ ಎದುರಿಸಿಲ್ಲವೋ, ಅಂತಹವರು ಕೇವಲ ಹೇಳಿಕೆ ಮಾತ್ರ ನೀಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ಪಕ್ಷದಲ್ಲಿ ಸ್ಥಾನ ಪಡೆಯಲು ಕಪಿಲ್ ಸಿಬಲ್ ಯಾವ ಚುನಾವಣೆಯಲ್ಲಿ ಹೋರಾಡಿದ್ದಾರೆ ಎಂದು ಸಲ್ಮಾನ್ ಖುರ್ಷಿದ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪಂಚರಾಜ್ಯ ಸೋಲಿಗೆ ತಲೆದಂಡ.. ಐದು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆಗೆ ಸೋನಿಯಾ ಸೂಚನೆ..
ಅಲ್ಲದೇ, ಗಾಂಧಿ ಕುಟುಂಬ ಕಾಂಗ್ರೆಸ್ನ್ನು ಒಂದುಗೂಡಿಸುವ ಯಂತ್ರ. ಸಂಕಷ್ಟದಲ್ಲಿ ಅವರ ನಾಯಕತ್ವವೇ ಒಳ್ಳೆಯದು. ಕಾಂಗ್ರೆಸ್ನ ಜನ ರಾಹುಲ್ ಗಾಂಧಿ ಪೂರ್ಣಪ್ರಮಾಣದ ಅಧ್ಯಕ್ಷರಾಗಬೇಕೆಂದು ಬಯಸಿದ್ದಾರೆ. ಪಕ್ಷದ ಆಂತರಿಕ ಚುನಾವಣೆಗಳ ನಂತರ ರಾಹುಲ್ ಈ ಕೆಲಸವನ್ನು ಮಾಡುತ್ತಾರೆ ಎಂದು ನಾನು ನಂಬಿದ್ದೇನೆ ಎಂದು ಖುರ್ಷಿದ್ ಹೇಳಿದ್ದಾರೆ.
ಖರ್ಗೆ-ಅಧೀರ್ ರಂಜನ್ ಚೌಧರಿ ಸಹ ವಾಗ್ದಾಳಿ: ಅದೇ ರೀತಿಯಾಗಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಕಪಿಲ್ ಸಿಬಲ್ ವಿರುದ್ಧ ಕಿಡಿಕಾರಿದ್ದಾರೆ. ಕಪಿಲ್ ಸಿಬಲ್ ಒಳ್ಳೆಯ ವಕೀಲರಾಗಿರಬಹುದು. ಆದರೆ, ಅವರು ಕಾಂಗ್ರೆಸ್ಗೆ ಒಳ್ಳೆಯ ನಾಯಕರಲ್ಲ. ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಲು ಯಾವುದೇ ಗ್ರಾಮಕ್ಕೂ ಕಪಿಲ್ ಸಿಬಲ್ ಹೋಗಿಲ್ಲ. ಅವರು ಉದ್ದೇಶಪೂರ್ವಕವಾಗಿಯೇ ಪಕ್ಷವನ್ನು ಬಲಹೀನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಯಾರೊಬ್ಬರಿಂದಲೂ ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ ಸಹ ಕಾಂಗ್ರೆಸ್ ಪಕ್ಷದ ಬೆಂಬಲವಿಲ್ಲದೇ ಕಪಿಲ್ ಸಿಬಲ್ ಏನಾದರೂ ಒಂದು ಸಾಧಿಸಿದ ಉದಾಹರಣೆಯನ್ನು ತೋರಿಸಲಿ. ತಮ್ಮ ಸಿದ್ಧಾಂತದ ಬಗ್ಗೆ ಸ್ವಂತ ಬಲದಿಂದ ಹೋರಾಡಲಿ. ಅದು ಬಿಟ್ಟು ಎಸಿ ರೂಮ್ನಲ್ಲಿ ಕುಳಿತು ಸಂದರ್ಶನಗಳನ್ನು ನೀಡಿದರೆ ಬರುವುದಾದರೂ ಏನು ಎಂದು ಟೀಕಿಸಿದ್ದಾರೆ.
ಛತ್ತೀಸ್ಗಢ್ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಕೂಡ ಸಿಬಲ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಚುನಾವಣೆಯನ್ನೇ ಎದುರಿಸದವರು ಕೇವಲ ಹೇಳಿಕೆ ಮಾತ್ರ ನೀಡುತ್ತಾರೆ. ಪಕ್ಷದ ಕಾರ್ಯಕರ್ತರು ಗಾಂಧಿ ಕುಟುಂಬದ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇತ್ತ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಪಿಲ್ ಸಿಬಲ್ ಕಾಂಗ್ರೆಸ್ ಸಂಸ್ಕೃತಿಯ ವ್ಯಕ್ತಿಯೇ ಅಲ್ಲ. ಅವರಿಗೆ ಕಾಂಗ್ರೆಸ್ನ ಎಬಿಸಿಡಿ ಸಹ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಚುನಾವಣಾ ರಾಜಕೀಯದ ಮೇಲೆ ಫೇಸ್ಬುಕ್, ಟ್ವಿಟರ್ ಪ್ರಭಾವ ಕೊನೆಗಾಣಿಸಿ: ಸೋನಿಯಾ ಗಾಂಧಿ ಆಗ್ರಹ