ನವದೆಹಲಿ: ಜಲ ಜೀವನ ಮಿಷನ್(JJM) ಕುರಿತು ಈಶಾನ್ಯ ರಾಜ್ಯಗಳ ಸಾರ್ವಜನಿಕರ ಆರೋಗ್ಯ ಇಂಜಿನಿಯರಿಂಗ್ ಇಲಾಖೆ (PHED) ಮಂತ್ರಿಗಳ ಸಮ್ಮೇಳನ ಇಂದು ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಕೇಂದ್ರದ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ವಹಿಸಿಕೊಳ್ಳಲಿದ್ದಾರೆ.
ಗುವಾಹಟಿಯ ಅಸ್ಸೋಂ ಆಡಳಿತ ಸಿಬ್ಬಂದಿ ಕಾಲೇಜಿನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಎಲ್ಲ 8 ಈಶಾನ್ಯ ರಾಜ್ಯಗಳ ಸಾರ್ವಜನಿಕರ ಆರೋಗ್ಯ ಇಂಜಿನಿಯರಿಂಗ್ ವಿಭಾಗದ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕೋವಿಡ್ ನಿಯಮಗಳನ್ನು ಅನುಸರಿಸಿ ಸಮ್ಮೇಳನ ನಡೆಸಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಈಶಾನ್ಯ ರಾಜ್ಯಗಳಲ್ಲಿ ನೀರಿನ ಸೌಲಭ್ಯ ಇಲ್ಲದಿರುವ ಮನೆಗಳಿಗೆ ಆದಷ್ಟು ಬೇಗ ನೀರಿನ ಸಂಪರ್ಕ ಒದಗಿಸುವ ಕುರಿತಂತೆ ಹಾಗೂ ಈವರೆಗೆ ಈ ಯೋಜನೆಯು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಅನ್ನೋದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.
‘ಜಲ ಜೀವನ ಶಕ್ತಿ’ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (DDWS), ರಾಜ್ಯಗಳ ಸಹಭಾಗಿತ್ವದಲ್ಲಿ ಜಲಶಕ್ತಿ ಸಚಿವಾಲಯವು ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ನೀರಿನ ಸೌಲಭ್ಯ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: 'ಗಗನಯಾನ' ಮಿಷನ್: ಮುಂದಿನ ವರ್ಷಾಂತ್ಯ ಇಲ್ಲವೇ 2023ರಲ್ಲಿ ಆರಂಭ: ಜಿತೇಂದ್ರ ಸಿಂಗ್
2024ರ ವೇಳೆಗೆ ದೇಶದ ಪ್ರತಿಯೊಂದು ಮನೆಗೂ ಟ್ಯಾಪ್ ನೀರಿನ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ. ಈಶಾನ್ಯ ರಾಜ್ಯಗಳಿಗೆ ಈ ಯೋಜನೆಯನ್ನು ಸಮರ್ಪಕವಾಗಿ ಒದಗಿಸುವ ಸಲುವಾಗಿ, ಕೇಂದ್ರ ಸರ್ಕಾರ 2021-22ರ ಆರ್ಥಿಕ ವರ್ಷದಲ್ಲಿ 9,262 ಕೋಟಿ ರೂ. ಅನುದಾನ ನೀಡಿದೆ.