ನವದೆಹಲಿ: ದೇಶದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಬೇಕಾದರೆ ಜನರ ಮನಸ್ಥಿತಿಯನ್ನು ಮೊದಲಿಗೆ ಬದಲಾಯಿಸಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ಕಾರುಗಳಲ್ಲಿ ಪ್ರಯಾಣಿಸುವಾಗ ಕೆಲ ಮುಖ್ಯಮಂತ್ರಿಗಳೇ ಸೀಟ್ ಬೆಲ್ಟ್ ಧರಿಸಲು ನಿರಾಕರಿಸಿದ ಪ್ರಸಂಗಗಳನ್ನು ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು. ಇಲ್ಲಿ ನಡೆದ ಐಎಎನ ಜಾಗತಿಕ ಶೃಂಗಸಭೆ-ನೇಷನ್ಸ್ ಆ್ಯಸ್ ಬ್ರ್ಯಾಂಡ್ಸ್‌ನಲ್ಲಿ ಗಡ್ಕರಿ ಮಾತನಾಡಿದರು.
"ಸಾಮಾನ್ಯ ಜನರ ಕಾರುಗಳನ್ನು ಬಿಡಿ. ನಾನು ನಾಲ್ವರು ಮುಖ್ಯಮಂತ್ರಿಗಳೊಂದಿಗೆ ಅವರ ಕಾರುಗಳಲ್ಲಿ ಸಂಚರಿಸಿದ್ದೇನೆ. ಅವರ ಹೆಸರು ಹೇಳಲಾರೆ. ನಾನು ಮುಂದಿನ ಸೀಟಿನಲ್ಲಿದ್ದೆ. ಸೀಟ್ ಬೆಲ್ಟ್ ಹಾಕದಿದ್ದರೂ ಯಾವುದೇ ಸೌಂಡ್ ಬಾರದ ರೀತಿಯಲ್ಲಿ ಅಲ್ಲೊಂದು ಕ್ಲಿಪ್ ಹಾಕಲಾಗಿರುತ್ತಿತ್ತು. ನಾನಾಗಿಯೇ ಡ್ರೈವರ್ಗೆ ಸೀಟ್ ಬೆಲ್ಟ್ ಎಲ್ಲಿದೆ ಎಂದು ಕೇಳಿ ಧರಿಸಿದ್ದೇನೆ. ಈಗ ನಾನು ಅಂಥ ಕ್ಲಿಪ್ಗಳ ತಯಾರಿಕೆ ಮತ್ತು ಮಾರಾಟವನ್ನೇ ಬ್ಯಾನ್ ಮಾಡಿಸಿದ್ದೇನೆ" ಎಂದು ಅವರು ಹೇಳಿದರು.
ಹಿಂದಿನ ಸೀಟಿನಲ್ಲಿ ಕುಳಿತವರಿಗೆ ಬೆಲ್ಟ್ ಅಗತ್ಯವಿದೆಯಾ ಎಂಬ ವಿಷಯದಲ್ಲಿ ಮಾತನಾಡುದ ಗಡ್ಕರಿ, "ಹಿಂದಿನ ಸೀಟಿನಲ್ಲಿ ಕುಳಿತವರಿಗೆ ಬೆಲ್ಟ್ ಅಗತ್ಯವಿಲ್ಲ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಇದೇ ಈಗ ಸಮಸ್ಯೆಯಾಗಿರುವುದು. ಯಾವುದೇ ಅಪಘಾತದ ಬಗ್ಗೆ ನಿರ್ದಿಷ್ಟವಾಗಿ ನಾನಿಲ್ಲಿ ಹೇಳಲ್ಲ. ಆದರೆ ಮುಂದಿನ ಹಾಗೂ ಹಿಂದಿನ ಸೀಟಿನಲ್ಲಿ ಕುಳಿತವರಿಗೆ ಸೀಟ್ ಬೆಲ್ಟ್ ಅಗತ್ಯವಿದೆ" ಎಂದು ತಿಳಿಸಿದರು.
"ಎಲ್ಲಾ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ" ಎಂದು ಗಡ್ಕರಿ ಹೇಳಿದರು. "ಇದೇ ಕಾರು ತಯಾರಕರು ತಮ್ಮ ಕಾರುಗಳನ್ನು ರಫ್ತು ಮಾಡುವಾಗ 6 ಏರ್‌ಬ್ಯಾಗ್‌ಗಳನ್ನು ಹಾಕುತ್ತಾರೆ. ಆದರೆ ಭಾರತೀಯ ಕಾರುಗಳಿಗೆ ಕೇವಲ 4 ಏರ್‌ಬ್ಯಾಗ್‌ಗಳನ್ನು ಏಕೆ ಹಾಕುವುದು ಏಕೆ? ನಮ್ಮ ಜೀವನಕ್ಕೆ ಯಾವುದೇ ಮೌಲ್ಯವಿಲ್ಲವೇ? ಏರ್‌ಬ್ಯಾಗ್‌ನ ಬೆಲೆ ಕೇವಲ 900 ರೂ. ಮತ್ತು ಇವುಗಳ ಬಳಕೆಯ ಸಂಖ್ಯೆ ಹೆಚ್ಚಾದಾಗ ವೆಚ್ಚ ಇನ್ನೂ ಕಡಿಮೆಯಾಗುತ್ತದೆ" ಎಂದು ಗಡ್ಕರಿ ಹೇಳಿದರು.
ಭಾನುವಾರದ ಅಪಘಾತದ ಕುರಿತು ಮಾತನಾಡಿದ ಗಡ್ಕರಿ, ಸೈರಸ್ ಮಿಸ್ತ್ರಿ ನನ್ನ ಒಳ್ಳೆಯ ಸ್ನೇಹಿತರಾಗಿದ್ದರು ಎಂದು ಹೇಳಿದರು. ಈ ಅಪಘಾತ ಅತ್ಯಂತ ದುರದೃಷ್ಟಕರ ಮತ್ತು ಇದರಿಂದ ದೇಶಕ್ಕೆ ದೊಡ್ಡ ಆಘಾತವಾಗಿದೆ ಎಂದರು.