ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಶ್ರೀನಗರದಲ್ಲಿ ಜಿ20 ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆ ನಡೆಸಲು ಸಾಕಷ್ಟು ಸವಾಲುಗಳಿದ್ದವು. ಆದರೆ ನಾವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸಹಕಾರದೊಂದಿಗೆ ಸಭೆಗಳನ್ನು ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಜಿ20 ಶೆರ್ಪಾ ಅಮಿತಾಭ್ ಕಾಂತ್ ಹೇಳಿದರು. ಸಭೆಯ ಸಕಾರಾತ್ಮಕ ಫಲಿತಾಂಶಗಳ ಕುರಿತು ಜಿ20 ಶೆರ್ಪಾ ಅಮಿತಾಭ್ ಕಾಂತ್ ಈಟಿವಿ ಭಾರತ ಜೊತೆ ಪ್ರತ್ಯೇಕವಾಗಿ ಮಾತನಾಡಿದರು.
"ಇಲ್ಲಿಯವರೆಗೆ ನಡೆದ ಸಭೆಗಳು ರಚನಾತ್ಮಕ ಮತ್ತು ಸಕಾರಾತ್ಮಕವಾಗಿವೆ. ಇಂದು ನಮ್ಮ ಮಾರ್ಗಸೂಚಿಯನ್ನು ಕಾರ್ಯಕಾರಿ ಗುಂಪು ಅನುಮೋದಿಸಿದೆ ಮತ್ತು ನಿನ್ನೆ ಪ್ರವಾಸೋದ್ಯಮ ಚಿತ್ರೀಕರಣ ಕಾರ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು. ಇಂದು ಜಿ20 ಪ್ರವಾಸೋದ್ಯಮ, ಆಹಾರ ಪದ್ಧತಿ ಮತ್ತು ಕಾಶ್ಮೀರದ ಸಂಸ್ಕೃತಿಯನ್ನು ಉತ್ತೇಜಿಸಿದೆ ಎಂದರು.
ನಾವು ಇಲ್ಲಿ ದಾಖಲೆ ಸಂಖ್ಯೆಯ ಪ್ರತಿನಿಧಿಗಳ ಜೊತೆ ಸಭೆಗಳನ್ನು ನಡೆಸಿದ್ದೇವೆ: ಭಾರತವು ತನ್ನ G20 ಅಧ್ಯಕ್ಷತೆಯ ಅಡಿಯಲ್ಲಿ ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ವೇದಿಕೆಯ ಕಾರ್ಯಕಾರಿ ಗುಂಪಿನ ಸಭೆಯನ್ನು ನಡೆಸಿದೆ. ಮೂರನೇ G20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯು ಪ್ರಸ್ತುತ ಶ್ರೀನಗರದ ಶೇರ್ ಐ ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (SKICC) ನಲ್ಲಿ ನಡೆಯಿತು. ಜಿ20 ಪ್ರವಾಸೋದ್ಯಮ ಸಭೆ ಯಶಸ್ವಿ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಅಮಿತಾಭ್ ಕಾಂತ್, "ನಾವು ಇಲ್ಲಿ ದಾಖಲೆ ಸಂಖ್ಯೆಯ ಪ್ರತಿನಿಧಿಗಳ ಜೊತೆ ಸಭೆಗಳನ್ನು ನಡೆಸಿದ್ದೇವೆ. ಅವರು ಕಾಶ್ಮೀರದಂತಹ ಸ್ಥಳವನ್ನು ಹಿಂದೆ ನೋಡಿಲ್ಲ ಮತ್ತು ತಮ್ಮ ಕುಟುಂಬಗಳೊಂದಿಗೆ ಮತ್ತೊಮ್ಮೆ ಭೇಟಿ ನೀಡಲು ಯೋಚಿಸುತ್ತಿರುವುದಾಗಿ ಹೇಳುತ್ತಿದ್ದಾರೆ ಎಂದರು.
ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮವನ್ನು ವಿಸ್ತರಿಸಬೇಕಾಗಿದೆ: ಕಾಶ್ಮೀರದ ಪ್ರವಾಸೋದ್ಯಮದ ಬಗ್ಗೆ ಮಾತನಾಡಿದ ಅವರು, "ಕಾಶ್ಮೀರವು ಸಾಕಷ್ಟು ವ್ಯಾಪ್ತಿಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ ಆದರೆ ನಾವು ಶ್ರೀನಗರ, ಗುಲ್ಮಾರ್ಗ್ ಮತ್ತು ಪಹಲ್ಗಾಮ್ ಅನ್ನು ಮೀರಿ ವ್ಯಾಪ್ತಿಯನ್ನು ವಿಸ್ತರಿಸಬೇಕಾಗಿದೆ. ಇನ್ನೂ ಅನೇಕ ಸ್ಥಳಗಳಿವೆ ಆದರೆ ಅದಕ್ಕಾಗಿ ನಮಗೆ ಮಾಸ್ಟರ್ ಪ್ಲ್ಯಾನ್ ಬೇಕು. ಮಾಸ್ಟರ್ ಪ್ಲಾನ್ ನಂತರ, ನಾವು ಅಲ್ಲಿ ಕೆಲವು ಖಾಸಗಿ ರೆಸಾರ್ಟ್ ಗಳನ್ನು ಸ್ಥಾಪಿಸಬೇಕಾಗಿದೆ ಎಂದು ಹೇಳಿದರು.
ಪ್ರವಾಸೋದ್ಯಮವು ವಾಸ್ತವವಾಗಿ ಖಾಸಗಿ ವಲಯದ ಜೊತೆ ತೊಡಗಿಸಿಕೊಳ್ಳುವಿಕೆಯಾಗಿದೆ. ಜಿ20 ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆಯ ಕಾರ್ಯಸೂಚಿಗಳ ಅನುಷ್ಠಾನದ ಬಗ್ಗೆ ಮಾತನಾಡಿದ ಅವರು, "ಅಂತಾರಾಷ್ಟ್ರೀಯ ಸಂಸ್ಥೆಗಳು ಒಮ್ಮತದ ನಂತರ ಶಿಫಾರಸುಗಳನ್ನು ಜಾರಿಗೆ ತರುತ್ತವೆ. ಇಲ್ಲಿ ಅನೇಕ ಸವಾಲುಗಳಿದ್ದವು. ಆದರೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸಹಕಾರದಿಂದಾಗಿ ಎಲ್ಲಾ ಸಭೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದರು.
ಪ್ರತಿನಿಧಿಗಳಿಂದ ಹುಲ್ಲುಹಾಸುಗಳಲ್ಲಿ ಯೋಗಾಭ್ಯಾಸ : ಇಂದು ಪ್ರತಿನಿಧಿಗಳಿಗೆ ಯಾವುದೇ ಕಾರ್ಯಕ್ರಮ ನಿಗದಿಪಡಿಸಲಾಗಿಲ್ಲ. ಆದರೆ, ಬೆಳಗ್ಗೆ ನಗರದ ವಿವಿಧ ಐತಿಹಾಸಿಕ ಸ್ಥಳಗಳಿಗೆ ಪ್ರತಿನಿಧಿಗಳನ್ನು ಕರೆದೊಯ್ಯಲಾಗುತ್ತಿದೆ. ಮುಂಜಾನೆ ಪ್ರತಿನಿಧಿಗಳು ಹೋಟೆಲ್ ಲಲಿತ್‌ನ ಹುಲ್ಲುಹಾಸುಗಳಲ್ಲಿ ಯೋಗಾಭ್ಯಾಸ ಮಾಡಿದರು. ನಂತರ ಅವರನ್ನು ಐತಿಹಾಸಿಕ ಮೊಘಲ್ ಉದ್ಯಾನ ನಿಶಾತ್‌ಗೆ ಕರೆದೊಯ್ಯಲಾಯಿತು. ನಂತರ ಪ್ರತಿನಿಧಿಗಳು ರಾಯಲ್ ಸ್ಪ್ರಿಂಗ್ಸ್ ಗಾಲ್ಫ್ ಕೋರ್ಸ್‌ನಲ್ಲಿ ಗಾಲ್ಫ್ ಆಡುತ್ತಿರುವುದು ಕಂಡುಬಂದಿತು. ಇದಲ್ಲದೇ ದಾಲ್ ಸರೋವರದಲ್ಲಿ ಶಿಕಾರಾ ರೈಡ್‌ಗೂ ತೆರಳಿದ್ದರು.
ಇದನ್ನೂ ಓದಿ:ಶ್ರೀನಗರದಲ್ಲಿ ಜಿ 20 ಶೃಂಗಸಭೆ: ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತ