ನವದೆಹಲಿ: ಹವಾಮಾನ ಬಿಕ್ಕಟ್ಟು, ಅಸ್ಥಿರತೆ ಮತ್ತು ಸಂಘರ್ಷಗಳನ್ನು ಅಂತ್ಯಗೊಳಿಸಲು ಜಿ20 ಗುಂಪು ಈಗಲೂ ಪ್ರಸ್ತುತವಾಗಿದೆ ಎಂಬುದನ್ನು ಈ ವರ್ಷದ ಜಿ 20 ಶೃಂಗಸಭೆ ಸಾಬೀತುಪಡಿಸಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಭಾನುವಾರ ಹೇಳಿದ್ದಾರೆ. "ಜಾಗತಿಕ ಆರ್ಥಿಕತೆಯು ಹವಾಮಾನ ಬಿಕ್ಕಟ್ಟು, ಅಸ್ಥಿರತೆ ಮತ್ತು ಸಂಘರ್ಷದ ಆಘಾತಗಳಿಂದ ಬಳಲುತ್ತಿರುವ ಸಮಯದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಜಿ20 ಪರಿಹಾರ ನೀಡಬಲ್ಲದು ಎಂದು ಸಾಬೀತುಪಡಿಸಿದೆ" ಎಂದು ಯುಎಸ್ ಅಧ್ಯಕ್ಷ ಬೈಡನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೆಪ್ಟೆಂಬರ್ 9 ಮತ್ತು 10 ರಂದು ಜಿ20 ಶೃಂಗಸಭೆಯು ನವದೆಹಲಿಯಲ್ಲಿ ನಡೆಯುತ್ತಿದೆ. ಶೃಂಗಸಭೆಯಲ್ಲಿ ಸೆಪ್ಟೆಂಬರ್ 9 ರಂದು ನವದೆಹಲಿ ಘೋಷಣೆಯನ್ನು ಅಂಗೀಕರಿಸಲಾಯಿತು. ಪ್ರಾದೇಶಿಕ ಸಮಗ್ರತೆ, ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯುವಂತೆ ಘೋಷಣೆಯು ರಾಷ್ಟ್ರಗಳಿಗೆ ಕರೆ ನೀಡಿದೆ.
ಈ ಘೋಷಣೆಯು ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದವನ್ನು ರೂಪಿಸುತ್ತದೆ. ಇದು ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿ, ಜಲಜನಕದ ಸ್ವಯಂಪ್ರೇರಿತ ತತ್ವಗಳು, ಸುಸ್ಥಿರ ಕಡಲ ಆರ್ಥಿಕತೆಗಾಗಿ ಚೆನ್ನೈ ತತ್ವಗಳು ಮತ್ತು ಆಹಾರ ಭದ್ರತೆಯ ತತ್ವಗಳನ್ನು ಇದು ಅನುಮೋದಿಸಿದೆ. ಘೋಷಣೆಯ ಎಲ್ಲಾ 83 ಪ್ಯಾರಾಗಳನ್ನು ಚೀನಾ ಮತ್ತು ರಷ್ಯಾ ಸೇರಿದಂತೆ ಶೇಕಡಾ 100 ರಷ್ಟು ಒಮ್ಮತದೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇದೇ ಮೊದಲ ಬಾರಿಗೆ ಘೋಷಣೆಯು ಯಾವುದೇ ಅಡಿಟಿಪ್ಪಣಿ ಅಥವಾ ಅಧ್ಯಕ್ಷರ ಸಾರಾಂಶವನ್ನು ಹೊಂದಿರಲಿಲ್ಲ.
ಶನಿವಾರ ನಡೆದ ಜಿ 20 ಸಭೆಯಲ್ಲಿ ಆಫ್ರಿಕನ್ ಒಕ್ಕೂಟವನ್ನು ಜಿ 20 ಯ ಹೊಸ ಖಾಯಂ ಸದಸ್ಯರಾಗಿ ಸೇರಿಸಲಾಯಿತು. ಆ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಜಾಗತಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ, ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಚಾಲನೆ ನೀಡಿದರು.
ಜಾಗತಿಕ ಜೈವಿಕ ಇಂಧನ ಮೈತ್ರಿಯು ಭಾರತದ ಜಿ 20 ಅಧ್ಯಕ್ಷತೆಯ ಆದ್ಯತೆಗಳಲ್ಲಿ ಒಂದಾಗಿದೆ. ಬ್ರೆಜಿಲ್, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್, ಪ್ರಮುಖ ಜೈವಿಕ ಇಂಧನ ಉತ್ಪಾದಕರು ಮತ್ತು ಗ್ರಾಹಕರಾಗಿ, ಮುಂದಿನ ಕೆಲವು ತಿಂಗಳುಗಳಲ್ಲಿ ಇತರ ಆಸಕ್ತ ರಾಷ್ಟ್ರಗಳೊಂದಿಗೆ ಜಾಗತಿಕ ಜೈವಿಕ ಇಂಧನ ಒಕ್ಕೂಟದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಲಿವೆ. ಭಾರತ, ಯುಎಸ್, ಸೌದಿ ಅರೇಬಿಯಾ ಮತ್ತು ಯುರೋಪಿಯನ್ ಯೂನಿಯನ್ ಮೆಗಾ ಭಾರತ-ಮಧ್ಯಪ್ರಾಚ್ಯ-ಯುರೋಪ್ ಹಡಗು ಮತ್ತು ರೈಲ್ವೆ ಸಂಪರ್ಕ ಕಾರಿಡಾರ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದು, ಶೃಂಗಸಭೆಯ ಮೊದಲ ದಿನದ ಮತ್ತೊಂದು ಪ್ರಮುಖ ಅಂಶವಾಗಿದೆ.
ಇದನ್ನೂ ಓದಿ : ಕ್ರಿಪ್ಟೊ ಕರೆನ್ಸಿ ಅಪಾಯ ತಡೆಗೆ ಒಗ್ಗಟ್ಟಾದ ವಿಶ್ವನಾಯಕರು; ಭಾರತದ ನಿಲುವಿಗೆ ಜಿ20 ಅನುಮೋದನೆ