ಗುರುಗ್ರಾಮ್ (ಹರಿಯಾಣ): ಗುರುಗ್ರಾಮ್‌ನಲ್ಲಿ ನಡೆಯಲಿರುವ ಜಿ20 ವಿದೇಶಾಂಗ ಸಚಿವರ ಸಭೆಗೆ ಭೇಟಿ ನೀಡುವ ಗಣ್ಯರನ್ನು ಸ್ವಾಗತಿಸಲು ರಸ್ತೆ ಪಕ್ಕದಲ್ಲಿ ಇಡಲಾಗಿದ್ದ ಹೂವಿನ ಕುಂಡಗಳನ್ನು ವ್ಯಕ್ತಿಯೊಬ್ಬರು ಕದಿಯಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಸಾಲಾಗಿ ಜೋಡಿಸಲಾಗಿದ್ದ ಹೂದಾನಿಗಳನ್ನು ರಹಸ್ಯವಾಗಿ ಕದಿಯುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನಮೋಹನ್(50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕದಿಯಲು ಬಳಸಿದ ಐಷಾರಾಮಿ ಕಾರನ್ನೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಕದ್ದ ಹೂಕುಂಡಗಳನ್ನು ಮರಳಿ ಪಡೆದು ಅವುಗಳನ್ನು ಅಲ್ಲಿಯೇ ಜೋಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಐಷಾರಾಮಿ ಕಾರಿನಲ್ಲಿ ಬಂದ ಆರೋಪಿ ಮನಮೋಹನ್ ಹೂಕುಂಡಗಳನ್ನು ಕದಿಯುತ್ತಿರುವುದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಆರೋಪಿಯ ವಿರುದ್ಧ ಟೀಕೆ ನಡೆಸಿದ್ದು, ಐಷಾರಾಮಿ ಕಾರನ್ನು ಕಳ್ಳತನಕ್ಕೆ ಬಳಸಿರುವ ಈತ ಹೂಕುಂಡಗಳನ್ನು ಖರೀದಿ ಮಾಡದಷ್ಟು ಬಡವನೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಕದಿಯುವಾಗ ಕಾರಿನ ಹಿಂಭಾಗದ ಜಾಗವನ್ನು ತುಸು ದೊಡ್ಡದು ಮಾಡಬೇಕಿತ್ತು. ಹೆಚ್ಚಿನ ಹೂದಾನಿಗಳನ್ನು ಕದಿಯಬಹುದಿತ್ತು ಎಂದು ಛೇಡಿಸಿದ್ದಾರೆ.
ಗುರುಗ್ರಾಮ್‌ನಲ್ಲಿ ಜಿ 20 ಕಾರ್ಯಕ್ರಮಕ್ಕಾಗಿ ಇಡಲಾಗಿದ್ದ ಹೂವಿನ ಕುಂಡಗಳನ್ನು ಇಬ್ಬರು ವ್ಯಕ್ತಿಗಳು ಕದ್ದಿದ್ದಾರೆ. ಈ ಬಗ್ಗೆ ಸಾಕ್ಷ್ಯವಾಗಿ ವಿಡಿಯೋ ಇದೆ. ಅದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ನಮ್ಮ ಅರಿವಿಗೆ ಬಂದಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗುರುಗ್ರಾಮ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (ಜಿಎಂಡಿಎ) ಜಂಟಿ ಸಿಇಒ ಎಸ್ ಕೆ ಚಾಹಲ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಸೂರತ್‌ನಲ್ಲಿ ಭಾರೀ ಪ್ರಮಾಣದಲ್ಲಿ ಗ್ಯಾಸ್ ಸಿಲಿಂಡರ್ ಕದಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ನಿವಾಸಿಗಳ ಮನೆಗಳಿಂದ ಗ್ಯಾಸ್ ಸಿಲಿಂಡರ್‌ಗಳು ಪದೇ ಪದೇ ನಾಪತ್ತೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ ಬಳಿಕ ವ್ಯಕ್ತಿ ಸಿಕ್ಕಿಬಿದ್ದಿದ್ದ.
ಮನೆಯವರು ಯಾವುದೋ ಕಾರಣಕ್ಕೆ ಹೊರ ಹೋದಾಗ ನಕಲಿ ಕೀಗಳನ್ನು ಬಳಸಿ ಮನೆಗಳ ಬಾಗಿಲು ತೆರೆದು ಗ್ಯಾಸ್ ಸಿಲಿಂಡರ್‌ಗಳನ್ನು ಕದಿಯುತ್ತಿದ್ದರು. ವಿಚಿತ್ರ ಎಂದರೆ ಈ ವೇಳೆ ಬೇರೆ ಯಾವುದೇ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿಲ್ಲ ಎಂಬುದು ವಿಚಾರಣೆಯಲ್ಲಿ ಬಯಲಾಗಿತ್ತು. ಮಾರುಕಟ್ಟೆಯಲ್ಲಿ ಕದ್ದ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದೆವು ಎಂದು ತನಿಖೆಯಲ್ಲಿ ಕಳ್ಳರು ಬಾಯ್ಬಿಟ್ಟಿದ್ದರು.
ಓದಿ: ಕೊರೊನಾ ವೈರಾಣು ಪಸರಿಸಿದ್ದು ಚೀನಾದ ವುಹಾನ್ ಲ್ಯಾಬ್ನಿಂದ: ಅಮೆರಿಕದ ಎಫ್ಬಿಐ