ನವದೆಹಲಿ: ಭಾರತದ ಅತಿಸೂಕ್ಷ್ಮ 4 ವಿಮಾನ ನಿಲ್ದಾಣಗಳಲ್ಲಿ ಫುಲ್ ಬಾಡಿ ಸ್ಕ್ಯಾನರ್ಗಳ ಅಳವಡಿಕೆಗೆ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಅನುಮತಿ ನೀಡಿದೆ. ಭದ್ರತಾ ತಪಾಸಣೆಯನ್ನು ತ್ವರಿತ ಮತ್ತು ದೋಷ ಮುಕ್ತವಾಗಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸಾರ್ವಜನಿಕ ಹೂಡಿಕೆ ಮಂಡಳಿಯಿಂದ (ಪಿಐಬಿ) ಫುಲ್ ಬಾಡಿ ಸ್ಕ್ಯಾನರ್ಗಳನ್ನು ಸ್ಥಾಪಿಸಲು ಅನುಮತಿ ಪಡೆದಿದೆ.
ಇದು ಪ್ರಯಾಣಿಕರನ್ನು ತಪಾಸಣೆ ಮಾಡುವ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ. ಕೋಲ್ಕತಾ, ಚೆನ್ನೈ, ಪುಣೆ ಮತ್ತು ಗೋವಾ ಸೇರಿದಂತೆ ದೇಶದ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಈ ಫುಲ್ ಬಾಡಿ ಸ್ಕ್ಯಾನರ್ ಗಳನ್ನು ಸ್ಥಾಪಿಸಲಾಗುವುದು. ಜುಲೈನಲ್ಲಿ ಸರ್ಕಾರವು 131 ಫುಲ್ ಬಾಡಿ ಸ್ಕ್ಯಾನರ್ಗಳನ್ನು ಖರೀದಿಸಲು ಟೆಂಡರ್ ಕರೆದಿತ್ತು. ಈ ಬಾಡಿ ಸ್ಕ್ಯಾನರ್ಗಳ ಮೂಲಕ ಕೇವಲ 15 ಸೆಕೆಂಡುಗಳಲ್ಲಿ ಪ್ರಯಾಣಿಕರೊಬ್ಬರ ತಪಾಸಣೆ ಪೂರ್ಣಗೊಳಿಸಬಹುದು. ಸ್ಕ್ಯಾನರ್ ಇಲ್ಲದೇ ತಪಾಸಣೆಗೆ 30 ಸೆಕೆಂಡ್ ತೆಗೆದುಕೊಳ್ಳುತ್ತದೆ.
ಅಲ್ಲದೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಒಡೆತನದಲ್ಲಿರುವ ನಿಲ್ದಾಣಗಳಲ್ಲಿ ಸ್ಥಾಪಿಸಲು 600 ಹ್ಯಾಂಡ್ಬ್ಯಾಗ್ ಸ್ಕ್ಯಾನರ್ಗಳ ಖರೀದಿಗಾಗಿ ಕೂಡ ಟೆಂಡರ್ ಕರೆಯಲಾಗಿತ್ತು. ಬಾಡಿ ಸ್ಕ್ಯಾನರ್ ಮತ್ತು ಹ್ಯಾಂಡ್ ಬ್ಯಾಗ್ ಸ್ಕ್ಯಾನರ್ಗಳ ಟೆಂಡರ್ ಮೊತ್ತ 1000 ಕೋಟಿ ರೂಪಾಯಿ ಆಗಿತ್ತು. ಆದರೆ ಇದಕ್ಕಾಗಿ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ)ಯ ಅನುಮತಿ ಬೇಕಾದ ಕಾರಣದಿಂದ ಟೆಂಡರ್ ಹಿಂಪಡೆಯಲಾಗಿತ್ತು.
500 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಅಂದಾಜು ವೆಚ್ಚದ ಎಲ್ಲ ಹೂಡಿಕೆ ಯೋಜನೆಗಳು ಪಿಐಬಿ ವ್ಯಾಪ್ತಿಗೆ ಬರುವುದರಿಂದ ಅಮೃತಸರ, ಗೋವಾ, ಶ್ರೀನಗರ, ಜಮ್ಮು, ಲೇಹ್, ವಾರಣಾಸಿ, ಚೆನ್ನೈ, ಪುಣೆ, ಕೋಲ್ಕತಾ, ರಾಯ್ಪುರ, ತಿರುಪತಿ, ಭೋಪಾಲ್ ಸೇರಿದಂತೆ 43 ವಿಮಾನ ನಿಲ್ದಾಣಗಳಲ್ಲಿ 131 ಪೂರ್ಣ ಬಾಡಿ ಸ್ಕ್ಯಾನರ್ಗಳು ಮತ್ತು 600 ಹೊಸ ಹ್ಯಾಂಡ್ - ಬ್ಯಾಗೇಜ್ ಸ್ಕ್ಯಾನರ್ ಯಂತ್ರಗಳನ್ನು ಸ್ಥಾಪಿಸುವುದು ಆರಂಭಿಕ ಪ್ರಸ್ತಾಪವಾಗಿತ್ತು.
ಆದಾಗ್ಯೂ, ವಿಮಾನ ನಿಲ್ದಾಣಗಳ ಸುರಕ್ಷತೆ ಮತ್ತು ಭದ್ರತೆಯಲ್ಲಿ ತೊಡಗಿರುವ ಮಧ್ಯಸ್ಥಗಾರರ ನಡುವಿನ ಇತ್ತೀಚಿನ ಸಭೆಯಲ್ಲಿ, ಮೂಲ ಯೋಜನೆಯ ಪ್ರಕಾರ ಒಂದೇ ಬಾರಿಗೆ ಎಲ್ಲ ಕಡೆಗೂ ಸ್ಕ್ಯಾನರ್ಗಳನ್ನು ಅಳವಡಿಸುವ ಬದಲಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಒಡೆತನದ ಮತ್ತು ನಿರ್ವಹಿಸುವ ಎಲ್ಲ ವಿಮಾನ ನಿಲ್ದಾಣಗಳ ಪೈಕಿ ಗರಿಷ್ಠ ಜನಸಂದಣಿ ಇರುವ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಪೂರ್ಣ - ದೇಹದ ಸ್ಕ್ಯಾನರ್ಗಳನ್ನು ಸ್ಥಾಪಿಸಲು ಪಿಐಬಿ ಅನುಮೋದನೆ ನೀಡಿತ್ತು. ಸಭೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ, ನಾಗರಿಕ ವಿಮಾನಯಾನ ಬ್ಯೂರೋ, ಗೃಹ ಸಚಿವಾಲಯ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
"ಈ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಪೂರ್ಣ ದೇಹದ ಸ್ಕ್ಯಾನರ್ಗಳ ಕೆಲಸದ ಯಶಸ್ಸಿನ ಮೌಲ್ಯಮಾಪನ ಮಾಡಿದ ನಂತರ, ಇತರ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಖರೀದಿ, ಸ್ಥಾಪನೆ, ಭದ್ರತಾ ಸಿಬ್ಬಂದಿಯ ತರಬೇತಿ ಮತ್ತು ಕಾರ್ಯಾಚರಣೆಗಳಂತಹ ವಿವಿಧ ಅಂಶಗಳನ್ನು ಚರ್ಚಿಸಲಾಯಿತು" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಈ ಮಿಲಿಮೀಟರ್-ವೇವ್ ತಂತ್ರಜ್ಞಾನ ಆಧಾರಿತ ಪೂರ್ಣ-ದೇಹದ ಸ್ಕ್ಯಾನರ್ಗಳು ದೇಹದ ಬಾಹ್ಯರೇಖೆಗಳ ತತ್ವದ ಮೇಲೆ ಕಾರ್ಯನಿರ್ವಹಿಸುತ್ತವೆ. ಅಂದರೆ ಇವುಗಳನ್ನು ದೇಹದಲ್ಲಿ ಮರೆಮಾಡಬಹುದಾದ ವಸ್ತುಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ : ಸಾಲ ತೀರಿದ 30 ದಿನಗಳಲ್ಲಿ ಮೂಲ ದಾಖಲೆ ಮರಳಿಸದಿದ್ದರೆ ದಿನಕ್ಕೆ 5 ಸಾವಿರ ರೂ. ದಂಡ: ಆರ್ಬಿಐ ಹೊಸ ನಿಯಮ