ಜಬಲ್‌ಪುರ (ಮಧ್ಯಪ್ರದೇಶ) : ಚುನಾವಣಾ ರಾಜ್ಯವಾದ ಮಧ್ಯಪ್ರದೇಶದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೃತ ಮಹಿಳೆಯೊಬ್ಬರ 500 ಕೋಟಿ ರೂಪಾಯಿ ಆಸ್ತಿಯನ್ನು ಹಣ್ಣಿನ ವ್ಯಾಪಾರಿಗಳು ನಕಲಿ ಉಯಿಲು ಬರೆಸಿಕೊಂಡು ಲಪಟಾಯಿಸಿದ್ದು, ಇದಕ್ಕೆ ಹೈಕೋರ್ಟ್ ತಡೆ ನೀಡಿದೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಿದೆ. ಕೋಟಿ ಕೋಟಿ ಮೊತ್ತದ ಆಸ್ತಿಯನ್ನು ಸಾಮಾನ್ಯ ವ್ಯಾಪಾರಿಗಳು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದು ರಾಜ್ಯದಲ್ಲಿ ಸಂಚಲನ ಉಂಟು ಮಾಡಿದೆ.
ಪ್ರಕರಣ ಪೂರ್ಣ ವಿವರ ಇಲ್ಲಿದೆ : ಇಬ್ಬರು ಪುತ್ರರಿದ್ದ ಪ್ರಭಾ ಮುಖರ್ಜಿ ಎಂಬ ಮಹಿಳೆಗೆ ಕೇಬಲ್ ಬಡಾ ಫುಹಾರಾ ಪ್ರದೇಶದಲ್ಲಿ 25,000 ಚದರ ಅಡಿ ವಿಸ್ತೀರ್ಣದ ಮನೆ ಹೊಂದಿದ್ದರು. ಜೊತೆಗೆ ಇವರು 400 ಎಕರೆ ಜಮೀನು, ಮತ್ತಿತರ ಆಸ್ತಿಯನ್ನು ಅವರು ಹೊಂದಿದ್ದರು. ಅಗರ್ಭ ಶ್ರೀಮಂತೆಯಾಗಿದ್ದ ಈಕೆ ಇಬ್ಬರು ಪುತ್ರರೊಂದಿಗೆ ದೊಡ್ಡ ಬಂಗಲೆಯಲ್ಲಿ ವಾಸವಾಗಿದ್ದರು. ಕುಟುಂಬಸ್ಥರಿಂದಲೂ ಈಕೆ ದೂರವಾಗಿದ್ದರು.
2008 ರಲ್ಲಿ ಇಬ್ಬರು ಯುವಕರು ಮಹಿಳೆಯ ಮನೆಯ ಮುಂದೆ ಚಿಕ್ಕದೊಂದು ಹಣ್ಣಿನ ಅಂಗಡಿ ಹಾಕಿಕೊಳ್ಳಲು ಅವಕಾಶ ಪಡೆದರು. ಹಣ್ಣಿನ ಗೂಡಂಗಡಿ ನಡೆಸುತ್ತಿದ್ದ ಇಬ್ಬರು ಬಳಿಕ ಸಾವಧಾನವಾಗಿ ಮಹಿಳೆಯ ಮನೆಯಲ್ಲೇ ವಾಸಕ್ಕೆ ಬಾಡಿಗೆ ಮನೆಯನ್ನು ಪಡೆದಿದ್ದಾರೆ. ಇದಾದ ನಂತರ ಆ ಮನೆಯಲ್ಲಿ ಅಹಿತಕರ ಘಟನೆಗಳು ಆರಂಭವಾಗಿವೆ. ಮನೆಯಲ್ಲಿ ಬಾಡಿಗೆಗಿದ್ದ ಹಣ್ಣಿನ ವ್ಯಾಪಾರಿಗಳು ಮಹಿಳೆಯೊಂದಿಗೆ ಹೆಚ್ಚಿನ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ದುರಂತ ಎಂಬಂತೆ 2010 ರಿಂದ 2015 ರ ನಡುವೆ ಇಬ್ಬರು ಪುತ್ರರು ಅಸುನೀಗಿದ್ದಾರೆ. ಇವರಿಗೆ ಸ್ಲೋ ಪಾಯಿಸನ್ ಹಾಕಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೂಡ ಇದೆ.
ಮಕ್ಕಳ ಸಾವಿನಿಂದ ಒಂಟಿಯಾಗಿದ್ದ ಮಹಿಳೆ ಖಿನ್ನತೆಗೆ ಒಳಗಾಗಿ ಅವರೂ ಕೂಡ 2015 ರಲ್ಲಿ ನಿಧನರಾಗಿದ್ದರು. ಇವರ ಅಂತ್ಯಕ್ರಿಯೆಯನ್ನು ಹಣ್ಣಿನ ವ್ಯಾಪಾರಿಗಳು ಮತ್ತಿಬ್ಬರು ಸೇರಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಕೋಟ್ಯಂತರ ರೂಪಾಯಿ ಆಸ್ತಿಯ ಒಡತಿ ಸಾವನ್ನಪ್ಪಿದ ಬಳಿಕ ಕುಟುಂಬಸ್ಥರ್ಯಾರೂ ಇತ್ತ ಕಡೆ ಗಮನ ಹರಿಸಿರಲಿಲ್ಲ. ಅದಾಗಲೇ ಹಣ್ಣಿನ ವ್ಯಾಪಾರಿಗಳು ತಮ್ಮ ಕರಾಮತ್ತು ಪ್ರದರ್ಶಿಸಿದ್ದಾರೆ.
ವ್ಯಾಪಾರಿಗಳ ಹೆಸರಲ್ಲಿ ನೂರಾರು ಕೋಟಿ ಆಸ್ತಿ: ಮಹಿಳೆ ಸಾವಿನ ನಂತರ ಹಣ್ಣಿನ ವ್ಯಾಪಾರಿಗಳು ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಆಸ್ತಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಹಿಳೆಯ ಸಂಬಂಧಿಯೊಬ್ಬರು ಈ ಬಗ್ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಯ ವೇಳೆ ಆಘಾತಕಾರಿ ಅಂಶಗಳು ಹೊರಬಿದ್ದಿವೆ.
ನಕಲಿ ಉಯಿಲು ಪತ್ರ: ಹಣ್ಣಿನ ವ್ಯಾಪಾರಿಗಳು ತಮ್ಮ ಹೆಸರಿಗೆ ಕೋಟ್ಯಂತರ ರೂಪಾಯಿ ಆಸ್ತಿಯನ್ನು ವರ್ಗ ಮಾಡುವಂತೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಉಯಿಲನ್ನೂ ಲಗತ್ತಿಸಲಾಗಿದೆ. ಇದು ನಕಲಿಯಾಗಿದ್ದು, ಮಹಿಳೆ ಬರೆದುಕೊಟ್ಟಿಲ್ಲ ಎಂದು ಆಕ್ಷೇಪಣಾ ಅರ್ಜಿ ಸಲ್ಲಿಸಲಾಗಿದೆ. ಜೊತೆಗೆ ಮಹಿಳೆ ಸಾವಿನ ದಿನಾಂಕ ಮತ್ತು ಉಯಿಲು ಪತ್ರದ ದಿನಾಂಕ ಹೆಚ್ಚು ಕಮ್ಮಿಯಾಗಿದೆ. ಅವರ ಸಾವಿನ ನಂತರ ಉಯಿಲು ಹೇಗೆ ಬರೆಯಲು ಸಾಧ್ಯ ಎಂದು ವಾದಿಸಲಾಗಿದೆ.
ಈ ಬಗ್ಗೆ ವಕೀಲ ಪ್ರಶಾಂತ್ ಪಾಠಕ್ ಮಾತನಾಡಿ, ಪ್ರಭಾ ಮುಖರ್ಜಿ ಅವರು ಹೇಗೆ ಸತ್ತರು ಮತ್ತು ಅವರು ತಮ್ಮ ಆಸ್ತಿಯನ್ನು ಯಾರ ಹೆಸರಿಗೆ ವರ್ಗಾಯಿಸಿದ್ದಾರೆ ಎಂಬುದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಅವರ ಮರಣದ ನಂತರ, ಹಣ್ಣಿನ ವ್ಯಾಪಾರಿಗಳು ಮಹಿಳೆಗೆ ಸೇರಿದ 100 ಎಕರೆ ಜಮೀನನ್ನು ತಮ್ಮ ಹೆಸರಿಗೆ ನೋಂದಾಯಿಸಲು ಅರ್ಜಿ ಸಲ್ಲಿಸಿದ್ದರು. ವಿಲ್ ಬಗ್ಗೆ ಪ್ರಭಾ ಮುಖರ್ಜಿ ಅವರ ಸಹೋದರನ ಮಗ ಆನಂದ್ ಚೌಧರಿಗೆ ತಿಳಿದಾಗ, ಅವರು ಈ ಬಗ್ಗೆ ಆಕ್ಷೇಪ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಪ್ರಭಾ ಮುಖರ್ಜಿ ಅವರ ಎರಡು ವಿಲ್‌ಗಳು ಬಹಿರಂಗಗೊಂಡಿದ್ದು, ಇವೆರಡೂ ಇಬ್ಬರು ವ್ಯಾಪಾರಿಗಳ ಹೆಸರಿನಲ್ಲಿವೆ ಎಂದು ಹೇಳಿದ್ದಾರೆ.
ಆಸ್ತಿ ವರ್ಗಕ್ಕೆ ತಡೆ, ತನಿಖೆಗೆ ಸೂಚನೆ; ಇನ್ನೂ, ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಆಸ್ತಿ ವರ್ಗಕ್ಕೆ ತಡೆ ನೀಡಿದೆ. ಹಣ್ಣಿನ ವ್ಯಾಪಾರಿಗಳಿಗೆ ಕೋಟ್ಯಂತರ ರೂಪಾಯಿ ಆಸ್ತಿ ಬಂದ ಹಿನ್ನೆಲೆಯನ್ನು ತನಿಖೆ ನಡೆಸಲು ಸೂಚಿಸಿದೆ. ಆಸ್ತಿ ವರ್ಗಾವಣೆಯಲ್ಲಿ ದೊಡ್ಡ ವಂಚನೆ ನಡೆದಿದೆ. ಹಲವು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದು, ಹಣ ಪಡೆದು ಪ್ರಭಾ ಮುಖರ್ಜಿ ಅವರಿಂದ ಭೂಮಿಯನ್ನು ಲಪಟಾಯಿಸಿದ್ದಾರೆ ಎಂದು ಕುಟುಂಬದ ಸಂಬಂಧಿ ಆರೋಪಿಸಿದ್ದಾರೆ.
ಇದನ್ನೂ ಓದಿ: Explained: ಆರ್ಥಿಕಾಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ.. ಭಾರತದ ಏಳಿಗೆಗೆ AI ಹೇಗೆ ಸಹಾಯಕ!