ರಾಂಚಿ(ಜಾರ್ಖಂಡ್):ಪಂಚಶೀಲ ನಗರದಿಂದ ಶಹದೇವ್ ನಗರದ ಕಡೆಗೆ ಹರಿಯುವ ಚರಂಡಿಯಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾರೆ. ಕೊಚ್ಚಿ ಹೋದ ವ್ಯಕ್ತಿಯನ್ನು ಅಜಯ್ ಪ್ರಸಾದ್ ಅಗರ್ವಾಲ್(55) ಎಂದು ಗುರುತಿಸಲಾಗಿದೆ.
ಈತ ಹಣ್ಣುಗಳ ವ್ಯಾಪಾರಿಯಾಗಿದ್ದು, ಊರೂರು ಸುತ್ತಿ ಹಣ್ಣು ವ್ಯಾಪಾರ ಮಾಡ್ತಿದ್ದರು. ಪಾಂಡಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನೆರೆಹೊರೆಯವರು ಕಾಣೆಯಾದ ವೃದ್ಧನಿಗಾಗಿ ಶೋಧ ನಡೆಸುತ್ತಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ರಾತ್ರಿ ಚರಂಡಿ ಬಳಿ ನಡೆದುಕೊಂಡು ಬರುತ್ತಿದ್ದ ಅಜಯ್ ಕಾಲು ಜಾರಿ ತುಂಬಿ ಹರಿಯುತ್ತಿದ್ದ ತೆರೆದ ಚರಂಡಿಯಲ್ಲಿ ಬಿದ್ದರು.
ಇದನ್ನು ಕಂಡು ತಕ್ಷಣವೇ ಹತ್ತಿರದಲ್ಲಿದ್ದ ನಾಲ್ಕೈದು ಜನರು ಸ್ಥಳಕ್ಕೆ ಧಾವಿಸಿ ಚರಂಡಿಯಿಂದ ಮೇಲೆತ್ತಲು ಪ್ರಯತ್ನಿಸಿದರಾದರೂ ನೀರಿನ ರಭಸಕ್ಕೆ ಈ ಹಣ್ಣಿನ ವ್ಯಾಪಾರಿ ಕೊಚ್ಚಿ ಹೋದರು ಎಂದು ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. NDRF ತಂಡವು ಕೂಡ ಕೊಚ್ಚಿ ಹೋದ ವ್ಯಕ್ತಿಯ ಹುಡುಕಾಟ ನಡೆಸುತ್ತಿದೆ.
ಇನ್ನು ರಾಂಚಿಯಲ್ಲಿ ಈ ರೀತಿಯ ಪ್ರಕರಣ ಇದೇ ಮೊದಲಲ್ಲ. ಹಿಂದೆಯೂ ಬಹಳಷ್ಟು ಜನ ತೆರೆದ ಚರಂಡಿಗಳಿಂದಾಗಿ ಅಪಘಾತಕ್ಕೀಡಾಗಿದ್ದಾರೆ ಹಾಗೂ ಕೊಚ್ಚಿ ಹೋಗಿದ್ದಾರೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳ ಹಿಂದೆ ರಾಂಚಿಯಲ್ಲಿ ಹುಡುಗಿಯೊಬ್ಬಳು ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಳು. ನಂತರ ಸೆಪ್ಟೆಂಬರ್ 2020ರಲ್ಲಿ ಹಜಾರಿಬಾಗ್‌ನ ಉಮೇಶ್ ರಾಣಾ ಕೊರ್ಹಾ ಟೋಲಿಯಲ್ಲಿ ವ್ಯಕ್ತಿ ಒಬ್ಬರು ಕೊಚ್ಚಿ ಹೋಗಿದ್ರು. ಈ ಬಗ್ಗೆ ಸರ್ಕಾರಕ್ಕೆ ಎಷ್ಟೇ ಪತ್ರ ಬರೆದರೂ ತೆರೆದ ಚರಂಡಿಗಳನ್ನು ಮುಚ್ಚಲು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕ್ಷೀರಭಾಗ್ಯ ಯೋಜನೆಯ ಹಾಲಿನಪುಡಿ ಅಕ್ರಮ ಸಾಗಣೆ ಆರೋಪ - ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಆರೋಪಿ