ನವದೆಹಲಿ: ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೆ ನವೀಕರಿಸಲಾದ ಸೆಂಟ್ರಲ್ ವಿಸ್ತಾ, ಇಂಡಿಯಾ ಗೇಟ್ನಲ್ಲಿ ನಿರ್ಮಿಸಲಾದ ನೇತಾಜಿ ಸುಭಾಷ್ಚಂದ್ರ ಬೋಸ್ ಪ್ರತಿಮೆ ಮತ್ತು ಕರ್ತವ್ಯಪಥವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಸೆ.8 ರಂದು) ಉದ್ಘಾಟಿಸಲಿದ್ದಾರೆ.
ವಿಸ್ತರಿಸಲಾದ ಸೆಂಟ್ರಲ್ ವಿಸ್ತಾದ ಕಾಮಗಾರಿಯ ವಿಡಿಯೋವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಕಣ್ಮನ ಸೆಳೆಯುತ್ತಿದೆ. ಡ್ರೋನ್ ಮೂಲಕ ನವೀಕೃತ ವಿಸ್ತಾ ಅವೆನ್ಯೂ ಪ್ರದೇಶದ ವಿಹಂಗಮ ನೋಟವನ್ನು ಸೆರೆ ಹಿಡಿಯಲಾಗಿದೆ. ವಿಶಾಲವಾದ ಹಸಿರು ಮತ್ತು ಆಧುನಿಕತೆಯನ್ನು ಒಳಗೊಂಡ ಸೆಂಟ್ರಲ್ ವಿಸ್ತಾ ಜನರ ಬಳಕೆಗೆ ಸಿದ್ಧವಾಗಿದೆ.
ರಾಜ್ಯವಾರು ಆಹಾರದ ಮಳಿಗೆಗಳು, ಕೆಂಪು ಗ್ರಾನೈಟ್, ಪಾದಚಾರಿ ಮಾರ್ಗಗಳು, ಹಸಿರು ಉದ್ಯಾನವನಗಳು ಸೆಂಟ್ರಲ್ ವಿಸ್ತಾದ ಪ್ರಮುಖ ಆಕರ್ಷಣೆಗಳಾಗಿವೆ. ಇವೆಲ್ಲವೂ ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೆ ವ್ಯಾಪಿಸಿವೆ.
ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ವಿಸ್ತರಿಸಿರುವ ಸೆಂಟ್ರಲ್ ವಿಸ್ತಾ ದೆಹಲಿಯಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆ ಆಕರ್ಷಣೀಯ ಕಾರ್ಯಕ್ರಮವಾಗಿದೆ.
ನೇತಾಜಿ ಪ್ರತಿಮೆ ಅನಾವರಣ: ಇಂಡಿಯಾ ಗೇಟ್ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲಾಗಿದ್ದ ಜಾರ್ಜ್ ದೊರೆಯ ಪುತ್ಥಳಿಯ ಜಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಅದನ್ನು ನಾಳೆ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಹಿಂದೆ ಇದ್ದ ಜಾರ್ಜ್ ದೊರೆಯ ಪುತ್ಥಳಿ ವಸಾಹತುಶಾಹಿಯನ್ನು ಪ್ರತಿನಿಧಿಸುತ್ತಿದ್ದ ಕಾರಣ ಆ ಜಾಗದಲ್ಲಿ ಸ್ವಾತಂತ್ರ್ಯ ವೀರನ ಪುತ್ಥಳಿ ನಿರ್ಮಿಸಲಾಗಿದೆ.
ಸೆಂಟ್ರಲ್ ವಿಸ್ಟಾ ಅವೆನ್ಯೂ 3 ಕಿ.ಮೀ ಉದ್ದವಿದೆ. ಇದು ಇಂಡಿಯಾ ಗೇಟ್ನ ಉತ್ತರದಿಂದ ದಕ್ಷಿಣ ಬ್ಲಾಕ್ವರೆಗೆ ಹರಡಿದೆ. ಇದು ರಾಜಪಥಕ್ಕೆ(ಕರ್ತವ್ಯ್ ಪಥ್) ತಾಕಿಕೊಂಡಿರುವ ಲಾನ್ಗಳು, ಅಂಡರ್ಪಾಸ್, ವಿಜಯ್ ಚೌಕ್ ಮತ್ತು ಇಂಡಿಯಾ ಗೇಟ್ ಪ್ಲಾಜಾವನ್ನೂ ಒಳಗೊಂಡಿದೆ.
ಓದಿ: ಅನಂತನಾಗ್ನಲ್ಲಿ ಆಕಸ್ಮಿಕ ಎನ್ಕೌಂಟರ್.. ಇಬ್ಬರು ಉಗ್ರರು ಮಟಾಷ್