ದಕ್ಷಿಣ ಆಫ್ರಿಕಾದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ಹೊಸ ರೂಪಾಂತರಿ ತಳಿ 'ಒಮಿಕ್ರಾನ್' ವಿಶ್ವದೆಲ್ಲೆಡೆ ಭಾರೀ ಆತಂಕ ಸೃಷ್ಟಿಸಿದೆ. ಆಕ್ರಮಣಕಾರಿ ತಳಿ ಎಂದೇ ಹೇಳಲಾಗುವ ಈ ರೂಪಾಂತರಿ ಭಾರತಕ್ಕೂ ಕರ್ನಾಟಕದ ಮೂಲಕ ಲಗ್ಗೆ ಇಟ್ಟಿದೆ. ಕೊರೊನಾ ಈಗಾಗಲೇ ಆಲ್ಫಾ, ಬೀಟಾ, ಡೆಲ್ಟಾ ಸೇರಿದಂತೆ ವಿವಿಧ ಹೆಸರಿನಲ್ಲಿ ರೂಪಾಂತರ ಪಡೆಡಿವೆ. ಇದೀಗ ಒಮಿಕ್ರಾನ್ನ ಸರದಿಯಾಗಿದೆ.
ಹಾಗಾದರೆ, ರೂಪಾಂತರಿ ಒಮಿಕ್ರಾನ್ ಎಷ್ಟು ಪರಿಣಾಮಕಾರಿ, ಅದನ್ನು ತಡೆಗಟ್ಟುವ ಮತ್ತು ಮುನ್ನೆಚ್ಚರಿಕೆ ವಹಿಸುವ ಕ್ರಮಗಳನ್ನು ತಿಳಿದುಕೊಳ್ಳೋಣ.
ಒಮಿಕ್ರಾನ್ ಉಗಮ ಸ್ಥಾನ ದಕ್ಷಿಣ ಆಫ್ರಿಕಾ
ಒಮಿಕ್ರಾನ್ SARS-CoV-2ನ ಹೊಸ ರೂಪಾಂತರವಾಗಿದೆ. ಇದನ್ನ ದಕ್ಷಿಣ ಆಫ್ರಿಕಾದಲ್ಲಿ 2021ರ ನವೆಂಬರ್ 24ರಂದು ಪತ್ತೆ ಹಚ್ಚಲಾಯಿತು. ಈ ರೂಪಾಂತರವು ವೈರಲ್ ಸ್ಪೈಕ್ ಪ್ರೋಟೀನ್ 30ಕ್ಕಿಂತ ಹೆಚ್ಚಿನದಾಗಿದೆ. ಇದು ಪ್ರತಿರಕ್ಷಣಾ ಕಾಯಗಳನ್ನು ಹೆಚ್ಚಾಗಿ ಹೊಂದಿದೆ. ಈ ತಳಿಯ ದಾಳಿಯಿಂದ ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಿದೆ. ಇದರಿಂದ ಒಮಿಕ್ರಾನ್ ವೈರಸ್ ಆಕ್ರಮಣಕಾರಿ ಮತ್ತು ಅಪಾಯಕಾರಿ ಎಂದು ವಿಶ್ವಸಂಸ್ಥೆ ಘೋಷಿಸಿದೆ.
ಈಗಿನ ಟೆಸ್ಟ್ಗಳಿಂದ ಒಮಿಕ್ರಾನ್ ಪತ್ತೆ ಸಾಧ್ಯವೇ?
ಕೊರೋನಾದ ನಿಖರತೆಯನ್ನು ಪತ್ತೆಹಚ್ಚಲು ದೇಶದಲ್ಲಿ ಪ್ರಸ್ತುತ RT-PCR ವಿಧಾನವನ್ನು ಬಳಸಲಾಗುತ್ತಿದೆ. ಈ ವಿಧಾನದಿಂದ ಒಮಿಕ್ರಾನ್ ಅನ್ನು ಪತ್ತೆ ಹಚ್ಚಬಹುದು ಎಂದು ಹೇಳಲಾಗುತ್ತದೆ. ಒಮಿಕ್ರಾನ್ ಸ್ಪೈಕ್ ಪ್ರೋಟಿನ್ ಅಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರಿಂದ ಅದರ ನಿಖರತೆ ತಿಳಿಯಲು ಜಿನೋಮಿಲ್ ಸೀಕ್ವೆನ್ಸಿ ಟೆಸ್ಟ್ ಅಗತ್ಯವಾಗಿದೆ.
ಒಮಿಕ್ರಾನ್ನಿಂದ ರಕ್ಷಣೆ ಪಡೆಯಲು ವಿಶೇಷ ಕಸರತ್ತಿನ ಅಗತ್ಯವಿಲ್ಲ ಎಂದು ತಜ್ಱರು ಹೇಳುತ್ತಾರೆ. ಆದರೆ, ಮಾಸ್ಕ್ ಧಾರಣೆ, ಕಡ್ಡಾಯ ಲಸಿಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬುದು ತಜ್ಱರ ಸಲಹೆಯಾಗಿದೆ.
ಮೂರನೇ ಅಲೆ ಎಬ್ಬಿಸಲಿದೆಯಾ ಒಮಿಕ್ರಾನ್?
ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿವೆ. ಭಾರತಕ್ಕೂ ಅದು ಅಡಿ ಇಟ್ಟಿದೆ. ಆದರೆ, ಒಮಿಕ್ರಾನ್ ಯಾವ ಪ್ರಮಾಣದಲ್ಲಿ ಹಬ್ಬಲಿದೆ, ಇದರ ತೀವ್ರತೆ ಏನು ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಲಸಿಕಾಕರಣದ ವೇಗವನ್ನು ಇನ್ನಷ್ಟು ಹೆಚ್ಚಿಸಿದರೆ ಸೋಂಕು ಹರಡುವ ತೀವ್ರತೆಗೆ ತಡೆ ಹಾಕಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆಯುತ್ತಿವೆ.
ಈಗಿನ ಲಸಿಕೆಗಳು ಒಮಿಕ್ರಾನ್ಗೆ ರಾಮಬಾಣವೇ?
ಕೊರೊನಾ ನಿರ್ನಾಮಕ್ಕೆ ಪ್ರಸ್ತುತ ನೀಡಲಾಗುತ್ತಿರುವ ಲಸಿಕೆಗಳು ಒಮಿಕ್ರಾನ್ ತಡೆಯುತ್ತವೆಯಾ ಎಂಬುದರ ಬಗ್ಗೆ ವೈಜ್ಞಾನಿಕ ತಳಹದಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಈಗಿನ ಲಸಿಕೆಗಳಲ್ಲಿನ ಪ್ರತಿಕಾಯಗಳು ಒಮಿಕ್ರಾನ್ ವಿರುದ್ಧ ಹೋರಾಡುತ್ತವೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಲಸಿಕಾಕರಣವನ್ನು ಇನ್ನಷ್ಟು ತೀವ್ರಗೊಳಿಸುವಂತೆ ಸರ್ಕಾರಗಳು ಸೂಚಿಸಿವೆ.
ಇದನ್ನೂ ಓದಿ: ಕೋವಿಡ್ ರೂಪಾಂತರಿ Omicron ಭೀತಿ: ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ