ಚೆನ್ನೈ (ತಮಿಳುನಾಡು): ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಆಡುವ ಮಾತು ದ್ವೇಷ ಭಾಷಣವಾಗಬಾರದು. ಸನಾತನ ಧರ್ಮವು ಉನ್ನತ ಕರ್ತವ್ಯಗಳ ಗುಚ್ಛ. ಆ ಧರ್ಮವನ್ನೇ ನಾಶ ಮಾಡಬೇಕು ಎಂಬುದು ಸರಿಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ತಮಿಳುನಾಡು ಮಾಜಿ ಸಿಎಂ ಅಣ್ಣಾದೊರೈ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸನಾತನ ಧರ್ಮದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಕಾಲೇಜೊಂದರ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎನ್ ಶೇಷಸಾಯಿ ಅವರಿದ್ದ ಪೀಠ ಈ ಹೇಳಿಕೆ ನೀಡಿದೆ.
ಸನಾತನ ಧರ್ಮವು ಹಿಂದು ಜೀವನ ವಿಧಾನವನ್ನು ಅನುಸರಿಸುವವರಿಗೆ ರಾಷ್ಟ್ರ, ಪೋಷಕರು ಮತ್ತು ಗುರುಗಳ ಬಗ್ಗೆ ಕರ್ತವ್ಯಗಳ ಬಗ್ಗೆ ಪಾಠ ಮಾಡುವ ಸಂಪದವಾಗಿದೆ. ಆಯಾ ವ್ಯಕ್ತಿಗಳಿಗೆ ಇರುವ ಕರ್ತವ್ಯಗಳ ಬಗ್ಗೆ ಸನಾತನದಲ್ಲಿ ಹೇಳಲಾಗಿದೆ. ಅಂತಹ ಧರ್ಮವನ್ನು ನಾಶಪಡಿಸುವ ಮಾತುಗಳೇಕೆ ಬರುತ್ತದೆ ಎಂದು ಕೋರ್ಟ್ ಪ್ರಶ್ನಿಸಿದೆ.
ಸನಾತನ ಧರ್ಮ ಒಂದು ಜೀವನ ವಿಧಾನವಾಗಿದೆ. ಸನಾತನ ಧರ್ಮದ ತತ್ವಗಳಲ್ಲಿ ಅಸ್ಪೃಶ್ಯತೆಯನ್ನು ಅನುಸರಿಸಲಾಗುವುದಿಲ್ಲ. ಹೀಗಾಗಿ ಅಸ್ಪಶೃತೆ ಆಚರಣೆಯ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ ಎಂದು ನ್ಯಾಯಮೂರ್ತಿ ಶೇಷಸಾಯಿ ಅವರಿದ್ದ ಪೀಠ ಹೇಳಿದೆ.
ಆಡುವ ಮಾತು ದ್ವೇಷದಿಂದ ಕೂಡಿರಬಾರದು: ಸಂವಿಧಾನ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಹಾಗಂತ ಅದರ ಹೆಸರಿನಲ್ಲಿ ಆಡುವ ಮಾತುಗಳು ಇನ್ನೊಬ್ಬರಿಗೆ ಸಮಸ್ಯೆಯಾಗಬಾರದು. ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯವನ್ನು ಪ್ರಯೋಗಿಸಿದಾಗ, ಯಾರಿಗೂ ನೋವಾಗದಂತೆ ನೋಡಿಕೊಳ್ಳುವುದು ಅವಶ್ಯಕ ಎಂದಿದೆ.
ಪ್ರತಿಯೊಂದು ಧರ್ಮವು ಅದರದ್ದೇ ಆದ ನಂಬಿಕೆಯ ಮೇಲೆ ಸ್ಥಾಪಿತವಾಗಿದೆ. ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಾಗ, ಅದು ಇನ್ನೊಂದು ಧರ್ಮ ಮತ್ತು ವ್ಯಕ್ತಿಗೆ ಅವಮಾನ ಉಂಟು ಮಾಡಬಾರದು. ಮುಕ್ತ ಭಾಷಣವು ಎಂದಿಗೂ ದ್ವೇಷ ಭಾಷಣವಾಗಿ ಮಾರ್ಪಾಡಾಗಬಾರದು ಎಂದು ಎಚ್ಚರಿಸಿದೆ.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಸನಾತನ ಧರ್ಮವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಅದು ಡೆಂಗ್ಯೂ, ಮಲೇರಿಯಾ ರೀತಿ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ಬಗ್ಗೆ ದೇಶಾದ್ಯಂತ ಟೀಕೆ ವ್ಯಕ್ತವಾಗಿರುವ ನಡುವೆ ಹೈಕೋರ್ಟ್ನ ಈ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಉದಯನಿಧಿ ಬಳಿಕ ಎ ರಾಜಾ 'ಸನಾತನ ಧರ್ಮ' ವಿವಾದಿತ ಹೇಳಿಕೆ: ಎಫ್ಐಆರ್ ದಾಖಲಿಸಲು ಕೋರಿ ಸುಪ್ರೀಂಗೆ ಅರ್ಜಿ