ನವದೆಹಲಿ: ವ್ಯಾಕ್ಸಿನೇಷನ್ ನೀತಿಯನ್ನು ಪರಿಷ್ಕರಿಸಿರುವ ಕೇಂದ್ರ ಸರ್ಕಾರ ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಮುಂದಾಗಿದೆ. ಇದರಂತೆ ಶೇ.75ಷ್ಟು ವ್ಯಾಕ್ಸಿನ್ಗಳನ್ನು ಖರೀದಿಸಿ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡುತ್ತಿದೆ.
ಲಸಿಕಾಭಿಯಾನದ ಮೂರನೇ ಹಂತವಾಗಿ 18 ರಿಂದ 44 ವರ್ಷದವರಿಗೆ ಮೇ 1ರಿಂದಲೇ ಲಸಿಕೆ ನೀಡಲು ಆರಂಭಿಸಲಾಗಿತ್ತು. ಲಸಿಕೆ ಸಂಗ್ರಹಿಸಿ ನೀಡುವ ಜವಾಬ್ದಾರಿಯನ್ನು ರಾಜ್ಯಗಳಿಗೆ ನೀಡಲಾಗಿತ್ತು. ಆದರೆ ಕೆಂದ್ರದ ಲಸಿಕಾಭಿಯಾನದ ನೀತಿಯನ್ನು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್ 45 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ, ಅದೇ 18- 44 ವಯೋಮಾನದವರಿಗೆ ಯಾಕಿಲ್ಲ ಎಂದು ಕೇಳಿತ್ತು.
ಇದನ್ನೂ ಓದಿ: ಬೆಂಗಳೂರು; ವಿದೇಶಕ್ಕೆ ತೆರಳುವವರ ಅನುಕೂಲಕ್ಕಾಗಿ ಲಸಿಕಾಕರಣ ಕೇಂದ್ರ ಸ್ಥಾಪನೆ
ಎಲ್ಲಾ ಅರ್ಹರಿಗೆ ಯಾವಾಗ ವ್ಯಾಕ್ಸಿನ್ ನೀಡಬೇಕೆಂಬುದರ ನೀಲನಕ್ಷೆ ತೋರಿಸಲು ಸೂಚಿಸಿದ್ದ ನ್ಯಾಯಾಲಯ, ಸರ್ಕಾರದ ಕೊರೊನಾ ಲಸಿಕೆ ನೀತಿಯು ಸ್ವೇಚ್ಛೆ ಹಾಗೂ ಅತಾರ್ಕಿಕವೆಂಬಂತೆ ಕಾಣುತ್ತಿದೆ ಎಂದು ಹೇಳಿತ್ತು. ಸುಪ್ರೀಂಕೋರ್ಟ್ ಸೂಚನೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಇದೀಗ ಎಲ್ಲಾ ವಯಸ್ಕರಿಗೂ ಉಚಿತವಾಗಿ ಲಸಿಕೆ ನೀಡಲು ಸಜ್ಜಾಗಿದೆ.
ಜನವರಿ 16ರಿಂದ ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಆರಂಭಿಸಲಾಯಿತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ವೈರಸ್ ವಿರುದ್ಧದ ಹೋರಾಟದಲ್ಲಿನ ಮುಂಚೂಣಿ ಕಾರ್ಮಿಕರಿಗೆ ನೀಡಲಾಯಿತು. ಆ ನಂತರ 60 ವರ್ಷ ಮೇಲ್ಪಟ್ಟ ಎಲ್ಲರಿಗೂ, ಬಳಿಕ 45 ವರ್ಷ ದಾಟಿದವರಿಗೆ ಲಸಿಕೆ ಹಾಕಲಾಯಿತು. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ.