ಹೈದರಾಬಾದ್: ಹೈದರಾಬಾದ್ ಮೂಲದ ಸಂಧ್ಯಾ ಕನ್ವೆನ್ಷನ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಶ್ರೀಧರ್ ರಾವ್ ಅವರನ್ನು ವಂಚನೆ ಪ್ರಕರಣ ಸಂಬಂಧ 3 ದಿನಗಳ ಕಾಲ ದೆಹಲಿ ಪೊಲೀಸರ ಕಸ್ಟಡಿಗೆ ನೀಡಲು ರಾಜೇಂದ್ರನಗರ ನ್ಯಾಯಾಲಯ ಅನುಮತಿ ನೀಡಿದೆ. ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಶ್ರೀಧರ್ ರಾವ್ ಅವರನ್ನು ದೆಹಲಿ ಪೊಲೀಸರು ವಂಚನೆ ಪ್ರಕರಣದಲ್ಲಿ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಿದ್ದರು.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಸಂಬಂಧಿಕರಿಗೆ ಕಳೆದ ಡಿಸೆಂಬರ್ನಲ್ಲಿ ದೆಹಲಿಯಲ್ಲಿ ಶ್ರೀಧರ್ ರಾವ್ 250 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಶ್ರೀಧರ್ ರಾವ್ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆ ಶ್ರೀಧರ್ ರಾವ್ ಇರುವ ಸ್ಥಳದ ಬಗ್ಗೆ ಖಚಿತ ಮಾಹಿತಿಯೊಂದಿಗೆ ಹೈದರಾಬಾದ್ಗೆ ಬಂದ ದೆಹಲಿ ಪೊಲೀಸರು ಸೈಬರಾಬಾದ್ ಪೊಲೀಸರ ಸಹಯೋಗದೊಂದಿಗೆ ವಿಮಾನ ಏರುವ ಕೆಲವೇ ಸಮಯದ ಮುನ್ನ ಶ್ರೀಧರ್ ರಾವ್ ಅವರನ್ನು ಬಂಧಿಸಿದ್ದರು.
ಬಂಧನದ ಬಳಿಕ ಶ್ರೀಧರ್ ರಾವ್ ಅವರನ್ನು ರಾಜೇಂದ್ರ ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ದೆಹಲಿ ಪೊಲೀಸರು, ಆರೋಪಿಯನ್ನು 3 ದಿನಗಳ ಕಾಲ ವಿಚಾರಣೆಗೆ ತಮ್ಮ ಕಸ್ಟಡಿಗೆ ನೀಡುವಂತೆ, ಟ್ರಾನ್ಸಿಟ್ ವಾರಂಟ್ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಅದಕ್ಕೆ ಅನುಮತಿ ನೀಡಿದೆ. ದೆಹಲಿಗೆ ಕರೆದೊಯ್ದ ಕೂಡಲೇ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರ್ಟ್ ಸೂಚಿಸಿದೆ. ಶ್ರೀಧರ್ ರಾವ್ ಅವರ ಜಾಮೀನು ಅರ್ಜಿಯನ್ನು ಕೂಡ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ. ಇದೀಗ ನ್ಯಾಯಾಲಯದ ಅನುಮತಿ ಪಡೆದು ಶ್ರೀಧರ್ ರಾವ್ ಅವರನ್ನು ವಿಮಾನದ ಮೂಲಕ ದೆಹಲಿ ಪೊಲೀಸರು ಕರೆದೊಯ್ದಿದ್ದಾರೆ.
ಈ ವೇಳೆ, ಮಾಧ್ಯಮದ ಜೊತೆ ಮಾತನಾಡಿದ ಶ್ರೀಧರ್ ರಾವ್, ಅಮಿತಾಬ್ ಸಂಬಂಧಿಕರಿಗೆ ಮೋಸ ಮಾಡಿದ್ದು, 180 ಕೋಟಿ ರೂ., ಅದಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇದ್ದು, ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು. ಸೆಕ್ಷನ್ 91 ಸಿಆರ್‌ಪಿಸಿ ಪ್ರಕಾರ, ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಅದಕ್ಕೆ ಶ್ರೀಧರ್ ರಾವ್ ಪ್ರತಿಕ್ರಿಯಿಸದ ಕಾರಣ ಪೊಲೀಸರು ವಾರಂಟ್‌ನೊಂದಿಗೆ ಬಂದು ಶ್ರೀಧರ್ ರಾವ್ ಅವರನ್ನು ಬಂಧಿಸಿದ್ದಾರೆ ಎಂದು ಅವರ ವಕೀಲ ಕಿರಣ್ ಹೇಳಿದ್ದಾರೆ.
ಶ್ರೀಧರ್ ಅವರು ಟ್ರ್ಯಾಕ್ಟರ್ ನೀಡುವುದಾಗಿ ಹೇಳಿ ಅಮಿತಾ ಬಚ್ಚನ್ ಅವರ ಸಂಬಂಧಿಕರಿಂದ 250 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ. ಅಮಿತಾ ಬಚ್ಚನ್ ಸಂಬಂಧಿಕರು ಶ್ರೀಧರ್‌ನಿಂದ ಮೋಸ ಹೋಗಿರುವುದು ತಿಳಿದು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಧರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಇವರನ್ನು ಪೊಲೀಸರು ಬಂಧಿಸಿರುವುದು ಇದೇ ಮೊದಲಲ್ಲ. ಇದು ನಾಲ್ಕನೇ ಬಾರಿ ಶ್ರೀಧರ್ ರಾವ್ ಬಂಧನಕ್ಕೊಳಗಾಗಿರುವುದು. ಶ್ರೀಧರ್ ರಾವ್ ವಿರುದ್ಧ ಸೆಕ್ಷನ್ 406,407,408,409,468,120ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ರೋಹಿಣಿ ಸಿಂಧೂರಿ, ರೂಪಾ ಬಹಿರಂಗ ಜಟಾಪಟಿ; ರಾಜ್ಯ ಸರ್ಕಾರದಿಂದ ನೋಟಿಸ್ ಜಾರಿ