ಗುಮ್ಲಾ (ಜಾರ್ಖಂಡ್): 2019 ರ ಪುಲ್ವಾಮಾ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಸಿಆರ್‌ಪಿಎಫ್ ಯೋಧನ ಗ್ರಾಮದ ಅಭಿವೃದ್ಧಿಯನ್ನು ಸರ್ಕಾರ ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರವು ತನ್ನ ಅಭಿವೃದ್ಧಿ ಯೋಜನೆಗಳಲ್ಲಿ ತಮ್ಮ ಗ್ರಾಮವನ್ನು ಸೇರಿಸಿಲ್ಲ ಎಂದು ಹುತಾತ್ಮ ಯೋಧನ ಕುಟುಂಬದವರು ಆರೋಪಿಸಿದ್ದಾರೆ. ಫೆಬ್ರವರಿ 14, 2019 ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾದ ಲೆಥ್‌ಪೋರಾ ಪ್ರದೇಶದಲ್ಲಿ ಜಮ್ಮು- ಶ್ರೀನಗರ ಹೆದ್ದಾರಿಯಲ್ಲಿ ನಡೆದ ದಾಳಿಯಲ್ಲಿ ಕೊಲ್ಲಲ್ಪಟ್ಟ 40 ಸಿಪಿಆರ್‌ಎಫ್ ಸೈನಿಕರಲ್ಲಿ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಬಸಿಯಾ ಬ್ಲಾಕ್‌ನ ಫರ್ಸಾಮಾ ಗ್ರಾಮದ ಹವಾಲ್ದಾರ್ ವಿಜಯ್ ಸೋರೆಂಗ್ ಕೂಡ ಸೇರಿದ್ದಾರೆ.
ದಾಳಿಯ ನಾಲ್ಕನೇ ವರ್ಷಾಚರಣೆ ನಿಮಿತ್ತ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಫರ್ಸಾಮಾದ ಸೊರೆಂಗ್ ಅವರ ಗ್ರಾಮದಲ್ಲಿ ಸ್ಥಳೀಯ ಸಿಆರ್‌ಪಿಎಫ್ ಬೆಟಾಲಿಯನ್ ಮತ್ತು ಸ್ಥಳೀಯಾಡಳಿತ ಮಂಗಳವಾರ ಕಾರ್ಯಕ್ರಮ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಹೈಸ್ಕೂಲ್ ಒಳಗೆ ಸ್ಥಾಪಿಸಲಾದ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಆದರೆ, ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸುವ ಕುರಿತು ಈ ಹಿಂದೆ ಹಲವಾರು ಬಾರಿ ಭರವಸೆ ನೀಡಲಾಗಿದ್ದರೂ ಅವನ್ನು ಈಡೇರಿಸಲಾಗಿಲ್ಲ ಎಂದು ಹುತಾತ್ಮ ಯೋಧನ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದರು.
ಎಕ್ಸ್‌ಗ್ರೇಷಿಯಾ ಹಣ ಬಿಡುಗಡೆ ಮಾಡಿದ್ದು ನಿಜ. ಆದರೆ ಗ್ರಾಮದ ಅಭಿವೃದ್ಧಿಯಾಗಲಿ, ರಸ್ತೆಯಾಗಲಿ ಆಗಲೇ ಇಲ್ಲ. ಕುಡಿಯುವ ನೀರಿನ ಸೌಲಭ್ಯವೂ ಸಿಕ್ಕಿಲ್ಲ ಎಂದು ಹುತಾತ್ಮ ವಿಜಯ್ ಸೋರೆಂಗ್ ಅವರ ತಂದೆ ಬಿರಿಶ್ ಸೊರೆಂಗ್ ಫರ್ಸಾಮಾದಲ್ಲಿನ ಅವರ ನಿವಾಸದಲ್ಲಿ ಈಟಿವಿ ಭಾರತ್‌ಗೆ ತಿಳಿಸಿದರು. ಅಭಿವೃದ್ಧಿಗೆ ಸಂಬಂಧಿಸಿದಂತೆ ಆಡಳಿತ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಬಿರಿಶ್ ಆಗ್ರಹಿಸಿದರು.
2014 ರ ಪುಲ್ವಾಮಾ ದಾಳಿಯ ಬಗ್ಗೆ ಮಾತನಾಡಿದ ಬಿರಿಶ್, ಅದೊಂದು ಹೇಡಿಗಳ ದಾಳಿಯಾಗಿತ್ತು. ಯುದ್ಧಭೂಮಿಯಲ್ಲಿ ಆತ ಹುತಾತ್ಮನಾಗಿದ್ದರೆ ನಾವು ಇನ್ನಷ್ಟು ಹೆಮ್ಮೆ ಪಡುತ್ತಿದ್ದೆವು. ಆದರೆ ಅವರು ಅವನನ್ನು ಮೋಸದಿಂದ ಕೊಂದರು ಎಂದು ಬಿರಿಶ್ ಹೇಳಿದರು. ಬಿರಿಶ್ ಸ್ವತಃ ಸೇನೆಯಲ್ಲಿದ್ದು ಇತ್ತೀಚೆಗೆ ನಿವೃತ್ತರಾಗಿದ್ದಾರೆ. ತಂದೆಯ ಹಾದಿಯಲ್ಲೇ ವಿಜಯ್ 1993ರಲ್ಲಿ ದೇಶಸೇವೆ ಮಾಡುವ ಉತ್ಸಾಹದಿಂದ ಸೇನೆ ಸೇರಿದ್ದರು. ನಂತರ 1995 ರಲ್ಲಿ ವಿಜಯ್ ಎಸ್‌ಪಿಜಿ ಸ್ಕ್ವಾಡ್‌ನಲ್ಲಿ ಕಮಾಂಡೋ ಆಗಿದ್ದರು. ಪುಲ್ವಾಮಾ ಘಟನೆಯ ಸಮಯದಲ್ಲಿ ಸಿಆರ್‌ಪಿಎಫ್ 12 ನೇ ಬೆಟಾಲಿಯನ್‌ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದರು. ಕುಮ್ಹಾರಿ ತಲಾಬ್ ಚೌಕ್‌ಗೆ ವಿಜಯ್ ಚೌಕ್ ಎಂದು ಮರುನಾಮಕರಣ ಮಾಡಿ ಪ್ರತಿಮೆ ಸ್ಥಾಪಿಸಬೇಕೆಂಬ ಬೇಡಿಕೆಗೆ ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿರಿಶ್ ಹೇಳಿದರು.
ಹುತಾತ್ಮ ಯೋಧನ ಹೆಸರಿನಲ್ಲಿ ಕ್ರೀಡಾಂಗಣ ನಿರ್ಮಿಸಬೇಕು ಮತ್ತು ಮನೆಗೆ ಹೋಗುವ ರಸ್ತೆಗೂ ಅವನ ಹೆಸರು ಮರು ನಾಮಕರಣ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದೆವು. ಆದರೆ, ಇದುವರೆಗೆ ನಮ್ಮ ಒಂದು ಬೇಡಿಕೆಯೂ ಈಡೇರಿಲ್ಲ ಎಂದು ಬಿರೀಶ್ ಹೇಳಿದರು. ಸರಕಾರ ನಿರಾಸಕ್ತಿ ತಾಳಿದರೂ ಗ್ರಾಮಸ್ಥರು ಕುಮ್ಹಾರಿ ತಲಾಬ್ ಚೌಕ್‌ನಲ್ಲಿ ಹುತಾತ್ಮ ಯೋಧ ವಿಜಯ್ ಸೋರೆಂಗ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಪುಲ್ವಾಮಾ ದಾಳಿ.. ಈಟಿವಿ ಭಾರತ್‌ಗೆ ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯ ಲಭ್ಯ