ನವದೆಹಲಿ: ಮಧ್ಯರಾತ್ರಿ ರಸ್ತೆಯ ಮೇಲೆ ಮದ್ಯಪಾನ ಮಾಡುತ್ತಿದ್ದ ಯುವಕರಿಗೆ ಬುದ್ಧಿಹೇಳಲು ಹೋದ ಪೊಲೀಸ್ ಅಧಿಕಾರಿ ಮೇಲೆಯೇ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಪಶ್ಚಿಮ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಗರದ ಪೀರ್ಗಂಡಿ ಮೆಟ್ರೋ ನಿಲ್ದಾಣದ ಮುಂಭಾಗದ ರಸ್ತೆಯ ಮೇಲೆ ಕಾರು ನಿಲ್ಲಿಸಿ, ಅದರ ಮೇಲೆ ಕುಳಿತು ನಾಲ್ವರು ಯುವಕರು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ, ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿ(ಎಎಸ್ಐ) ಅಲ್ಲಿಗೆ ಬಂದು ಯುವಕರಿಗೆ ಸಾರ್ವಜನಿಕವಾಗಿ ಮದ್ಯಪಾನ ಮಾಡುವುದು ತಪ್ಪು ಎಂದು ತಿಳಿ ಹೇಳಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ಯುವಕರು ಪೊಲೀಸ್ ಅಧಿಕಾರಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ವಾಗ್ವಾದ ವಿಕೋಪಕ್ಕೆ ತಿರುಗಿ ನಾಲ್ವರು ಯುವಕರು ಪೊಲೀಸ್ ಅಧಿಕಾರಿಯನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಲ್ಲದೇ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಯ ಪತ್ನಿಗೆ ತಾಜ್ಮಹಲ್ ಗಿಫ್ಟ್ ನೀಡಿದ ಮಧ್ಯಪ್ರದೇಶದ ನವ ಷಹಜಹಾನ್
ಈ ವೇಳೆ, ಸ್ಥಳದಲ್ಲಿದ್ದ ಜನರು ಪೊಲೀಸ್ ಅಧಿಕಾರಿಯನ್ನು ಯುವಕರಿಂದ ರಕ್ಷಿಸಿದ್ದಾರೆ. ಬಳಿಕ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣದ ದಾಖಲಿಸಿಕೊಂಡು ಹಲ್ಲೆ ನಡೆಸಿದ ಯುವಕರನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕರನ್ನು ಬುಲಂದ್ಶಹರ್ ನಿವಾಸಿಗಳಾದ ಅಮಿತ್ ರಾಘವ್, ವಿಜಯ್, ರಾಹುಲ್ ಮತ್ತು ಬಾಲ್ಸ್ವಾಡೈರಿ ನಿವಾಸಿ ಫಕ್ರುದ್ದೀನ್ ಎಂದು ಗುರುತಿಸಲಾಗಿದೆ.