ಸಿದ್ದಿಪೇಟ್, ತೆಲಂಗಾಣ: ಮಾಂಸಕ್ಕಾಗಿ ಎಮ್ಮೆಗಳ ಕಾಲಿನ ಭಾಗವನ್ನೇ ಕತ್ತರಿಸಿಕೊಂಡು ಹೋಗಿದ್ದ ನಾಲ್ವರಲ್ಲಿ ಓರ್ವವನ್ನು ಪೊಲೀಸರು ಬಂಧಿಸಿರುವ ಘಟನೆ ತೆಲಂಗಾಣದ ಸಿದ್ಧಿಪೇಟ್ ಜಿಲ್ಲೆಯ ಕೊಂಡಪಾಕ ಮಂಡಲಕ್ಕೆ ಸೇರಿದ ಸಿರಿಸಿನಗಂಡ್ಲ ಶಿವಾರು ಎಂಬ ಗ್ರಾಮದಲ್ಲಿ ನಡೆದಿದೆ.
ಸಿರಿಸಿನಗಂಡ್ಲ ಮತ್ತು ದಮ್ಮಕಪಲ್ಲಿ ಎಂಬ ಗ್ರಾಮದ ನಡುವೆ ಇರುವ ರಾಜೇಂದರ್ ರೆಡ್ಡಿ ಎಂಬಾತನಿಗೆ ಸೇರಿದ ಜಮೀನಿನಲ್ಲಿ ಕೆಲಸ ಮಾಡುವ ನೇಪಾಳದ ಓರ್ವ ಯುವಕ ಮತ್ತು ಆಂಧ್ರಕ್ಕೆ ಸೇರಿದ ಮೂವರು ಯುವಕರು ಈ ಕುಕೃತ್ಯ ನಡೆಸಿದ್ದಾರೆ.
ರಾಜಗಿರಿ ವೆಂಕಟೇಶಂ ಎಂಬ ರೈತ ಶುಕ್ರವಾರ ರಾತ್ರಿ ಹೊಲದಲ್ಲಿದ್ದ ಎಮ್ಮೆಯಿಂದ ಹಾಲು ಕರೆದುಕೊಂಡು ಮನೆಗೆ ತೆರಳಿದ್ದ. ರಾತ್ರಿ ಬಂದ ನಾಲ್ಕು ಮಂದಿ ಯುವಕರು ಮಾಂಸಕ್ಕಾಗಿ ಎರಡು ಎಮ್ಮೆಗಳ ಕಾಲಿನ ತೊಡೆಯ ಭಾಗವನ್ನು ಮಾಂಸಕ್ಕಾಗಿ ಕತ್ತರಿಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಕೇವಲ 12 ರೂಪಾಯಿಗೆ ಸಿಗುತ್ತೆ ಮನೆ.. ಎಲ್ಲಿ, ಯಾಕೆ ಗೊತ್ತಾ?
ಶನಿವಾರ ಬೆಳಗ್ಗೆ ಸ್ಥಳಕ್ಕೆ ಬಂದ ರೈತ ಘಟನೆಯನ್ನು ನೋಡಿ ಅವಕ್ಕಾಗಿದ್ದಾನೆ. ಎಮ್ಮೆಗಳು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದು ಗೊತ್ತಾಗಿದೆ. ಗ್ರಾಮಸ್ಥರ ಜೊತೆಗೂಡಿ ಸುತ್ತಮುತ್ತಲೂ ಪರಿಶೀಲನೆ ನಡೆಸಿದಾಗ, ಆ ನಾಲ್ಕೂ ಮಂದಿ ಯುವಕರು ಮಾಂಸದ ಅಡುಗೆ ಮಾಡಲು ಸಿದ್ಧ ಮಾಡಿಕೊಳ್ಳುತ್ತಿದ್ದದ್ದು ಕಂಡು ಬಂದಿದೆ.
ಗ್ರಾಮಸ್ಥರನ್ನು ನೋಡಿದ ಮೂವರು ಸ್ಥಳದಿಂದ ಪರಾರಿಯಾಗಿದ್ದು, ನೇಪಾಳ ಮೂಲದ ಯುವಕ ಸಂದೀಪ್ (25) ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದಾನೆ. ಸಿದ್ದಿಪೇಟ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.