ಅಜ್ಮೇರ್ (ರಾಜಸ್ಥಾನ): ರಾಜಸ್ಥಾನದ ಅಜ್ಮೇರ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ನೀರಿನ ಹೊಂಡದಲ್ಲಿ ಬಿದ್ದ ಯುವಕನನ್ನು ರಕ್ಷಿಸಲೆಂದು ನೀರಿಗೆ ಇಳಿದ ಏಳು ಜನರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಉಳಿದ ಮೂವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ನಾಸಿರಾಬಾದ್ ಉಪವಿಭಾಗದ ಲವೇರಾ ಗ್ರಾಮದಲ್ಲಿ ಈ ದುರಂತ ನಡೆದಿದೆ. ಸುರೇಂದ್ರ ಗುರ್ಜರ್ ಎಂಬ ಯುವಕ ಹೊಲದಲ್ಲಿ ಬಾವಿಯ ಬಳಿಯಿರುವ ಹೊಂಡದಿಂದ ಕುಡಿಯಲು ನೀರು ಸೇದಲು ಎಂದು ಹೋಗಿದ್ದರು. ಈ ವೇಳೆ ಸುರೇಂದ್ರ ಅದರಲ್ಲೇ ಬಿದ್ದಿದ್ದಾರೆ. ಆಗ ಸಂಬಂಧಿಕರು ಮತ್ತು ಪಕ್ಕದ ಜಮೀನಿನವರು ರಕ್ಷಣೆ ಮಾಡಲೆಂದು ಬಂದಿದ್ದಾರೆ. ಹೀಗೆ ಒಬ್ಬರ ಹಿಂದೆ ಒಬ್ಬರಂತೆ ಹೊಂಡಕ್ಕೆ ಇಳಿದಿದ್ದರು.
ಇದನ್ನೂ ಓದಿ: ದೇವರ ದರ್ಶನಕ್ಕೆ ಟ್ರಾಕ್ಟರ್ನಲ್ಲಿ ಹೋಗುತ್ತಿದ್ದಾಗ ಅಪಘಾತ: ಆರು ಜನರ ಸಾವು
ಆದರೆ, ಈ ಹೊಂಡಕ್ಕೆ ಇಳಿದ ಯಾರೂ ಕೂಡ ಹೊರಗೆ ಬಂದಿಲ್ಲ. ಅಲ್ಲದೇ, ಅವರೆಲ್ಲರೂ ಮೂರ್ಛೆ ಬಿದ್ದಿದ್ದಾರೆ. ಆಗ ಸುತ್ತಮುತ್ತಲಿನ ಹೊಲಗಳಲ್ಲಿ ಕೆಲಸ ಮಾಡುವವರನ್ನು ಸುರೇಂದ್ರ ಅವರ ಸಂಬಂಧಿಯಾದ ಮಹೇಂದ್ರ ಗುರ್ಜರ್ ಸಹಾಯಕ್ಕಾಗಿ ಕರೆದಿದ್ದಾರೆ. ಆಗ ಎಲ್ಲರೂ ಸೇರಿಕೊಂಡು ಹೊಂಡದಲ್ಲಿ ಬಿದ್ದು ಮೂರ್ಛೆ ಹೋಗಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿದ್ದಾರೆ.
ಆಸ್ಪತ್ರೆಯಲ್ಲಿ ಶೈತಾನ್ ಗುರ್ಜರ್, ದೇವಕರನ್ ಗುರ್ಜರ್, ಮಹೇಂದ್ರ ಗುರ್ಜರ್ ಮತ್ತು ಶಿವರಾಜ್ ಗುರ್ಜರ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇತ್ತ, ಸುರೇಂದ್ರ, ರತನ್ ಮತ್ತು ಶೇರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಜ್ಮೇರ್ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಅವಘಡಕ್ಕೆ ವಿಷಾನಿಲ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪಿಕ್ನಿಕ್ಗೆ ಬಂದಿದ್ದ ಆರು ಜನರು ಜಲಪಾತದಲ್ಲಿ ಮುಳುಗಿ ಸಾವು