ನವದೆಹಲಿ: ದೆಹಲಿಯ ಬವಾನಾ ಪ್ರದೇಶದಲ್ಲಿ ಶುಕ್ರವಾರ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 9 ವರ್ಷದ ಬಾಲಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಜೆ.ಜೆ. ಕಾಲೋನಿ ರುಕಯ್ಯ ಖಾತೂನ್, ಶಹಜಾದ್, ಅಫ್ರೀನ್ ಮತ್ತು ದಾನಿಶ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಫಾತಿಮಾ ಮತ್ತು ಶಹನಾಜ್ ಎಂದು ಗುರುತಿಸಲಾಗಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗಾರ್ಗ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಘಟನೆಯ ಬಗ್ಗೆ ನಮಗೆ ಮಧ್ಯಾಹ್ನ 2:48 ಕ್ಕೆ ಮಾಹಿತಿ ಬಂತು. ನಂತರ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಇದೇ ವೇಳೆ ಸ್ಥಳೀಯರಿಂದ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಉತ್ತರ ಹೊರವಲಯದ ಪೊಲೀಸರು ಕೂಡಲೇ ನಿಗದಿತ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.
ಕುಸಿದ ಕಟ್ಟಡ ರಾಜೀವ್ ರತನ್ ಆವಾಸ್ ಯೋಜನೆಯ ಭಾಗವಾಗಿದೆ. ಅದು ಸುಮಾರು 300ರಿಂದ 400 ಫ್ಲ್ಯಾಟ್‌ಗಳನ್ನು ಹೊಂದಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ ಹೊರವಲಯ) ಬ್ರಿಜೆಂದರ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಮೂರು ಜೆಸಿಬಿಗಳು, ಒಂದು ಹೈಡ್ರಾ ಮತ್ತು ಎರಡು ಆ್ಯಂಬುಲೆನ್ಸ್‌ಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಅವಶೇಷಗಳಿಂದ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಾಬು ಜಗಜೀವನ್ ರಾಮ್ ಸ್ಮಾರಕ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಐದು ತಿಂಗಳಲ್ಲಿ ವರದಿಯಾದ ಎರಡನೇ ಪ್ರಮುಖ ಕಟ್ಟಡ ಕುಸಿತ ಪ್ರಕರಣವಾಗಿದೆ. ಸುಮಾರು ಐದು ತಿಂಗಳ ಹಿಂದೆ (ಸೆಪ್ಟೆಂಬರ್ 13, 2021)ಉತ್ತರ ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಮೂರು ಅಂತಸ್ತಿನ ಹಳೆಯ ಕಟ್ಟಡವೊಂದು ಕುಸಿದು ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡಿತ್ತು.
ಇದನ್ನೂ ಓದಿ: ಯುವತಿ ಜೀವ ರಕ್ಷಿಸಲು ರೈಲ್ವೇ ಹಳಿ ಮೇಲೆ ಹಾರಿದ ಯುವಕ... ಇಬ್ಬರ ಮೇಲೆ ರೈಲು ಹಾದ್ರೂ, ಉಳಿತು ಪ್ರಾಣ!