ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ನ್ಯುಮೋನಿಯಾದಿಂದ ನಾಲ್ವರು ಪುಟ್ಟ ಬಾಲಕಿಯರ ಸರಣಿ ಸಾವುಗಳು ಸಂಭವಿಸಿವೆ. ಫೆಬ್ರವರಿ 10ರಿಂದ 12ರ ನಡುವೆ ಮೂವರು ಬಾಲಕಿಯರು ಮೃತಪಟ್ಟಿದ್ದರೆ, ನಾಲ್ಕನೇ ಮಗು ಮಂಗಳವಾರ ಕೊನೆಯುಸಿರೆಳೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸರ್ಕಾರಿ ಮಕ್ಕಳ ಆರೈಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಅಂತಾರಾ, ಲಕ್ಷ್ಮೀ, ಆಯುಷಿ ಮತ್ತು ದೀಪಾ ಎಂದು ಗುರುತಿಸಲಾಗಿದೆ. ಚಂದ್ರು ಎಂಬ ಬಾಲಕ ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಮಕ್ಕಳ ಸರಣಿ ಸಾವಿನ ಬಗ್ಗೆ ಈಗಾಗಲೇ ಚೀಫ್ ಮೆಡಿಕಲ್ ಆಫೀಸರ್ (ಸಿಎಂಒ) ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ.
ಸದ್ಯ ತಜ್ಞರ ತಂಡ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಮಕ್ಕಳನ್ನು ಶೀತದಿಂದ ರಕ್ಷಿಸಲು ಆರೈಕೆ ಕೇಂದ್ರದಲ್ಲಿ ಸಾಕಷ್ಟು ಆರೋಗ್ಯ ವ್ಯವಸ್ಥೆಗಳಿಲ್ಲ ಎಂದು ಬಹಿರಂಗವಾಗಿದೆ. ಈ ಶಿಶು ಪಾಲನಾ ಕೇಂದ್ರದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳು ಇದರೇ ಇರುವ ಕಾರಣ ಮಕ್ಕಳು ಶೀತಕ್ಕೆ ತುತ್ತಾಗಬೇಕಾಗಿದೆ. ಇದಾದ ನಡೆದ ಪರೀಕ್ಷೆಯಲ್ಲಿ ಮಕ್ಕಳು ನ್ಯುಮೋನಿಯಾದಿಂದ ಬಳಲುತ್ತಿದ್ದರು ಎಂದು ಖಚಿತವಾಗಿದೆ ಎಂದು ಗೊತ್ತಾಗಿದೆ.
ಚಿಕಿತ್ಸೆ ಪಡೆಯುತ್ತಿರುವಾಗಲೇ ನಾಲ್ವರು ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಸಿಎಂಎಸ್ ಡಾ.ಆರ್.ಪಿ.ಸಿಂಗ್, ಮಕ್ಕಳನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಸದ್ಯ ನಮ್ಮ ಆಸ್ಪತ್ರೆಯಲ್ಲಿ ಒಂದು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಮಗುವಿನ ಮೇಲೆ ವೈದ್ಯರ ತಂಡ ನಿರಂತರವಾಗಿ ನಿಗಾ ಇರಿಸಿದೆ. ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.
ಶೋಕಾಸ್ ನೋಟಿಸ್ ಜಾರಿ: ಮತ್ತೊಂದೆಡೆ, ಮಕ್ಕಳ ಸಾವಿನ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ವಿಕಾಸ್ ಸಿಂಗ್ ಆದೇಶಿಸಿದ್ದಾರೆ. ಮೃತ ಮಕ್ಕಳ ಮರಣೋತ್ತರ ಪರೀಕ್ಷೆಗೂ ಸೂಚಿಸಿದ್ದಾರೆ. ಜೊತೆಗೆ ಶಿಶುಪಾಲನಾ ಕೇಂದ್ರದ ಅಧೀಕ್ಷಕ ಕಿನ್‌ಶುಕ್ ತ್ರಿಪಾಠಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈ ನೋಟಿಸ್ಗೆ ಗುರುವಾರ ಬೆಳಗ್ಗೆಯೊಳಗೆ ಉತ್ತರ ನೀಡುವಂತೆ ತಾಕೀತು ಮಾಡಲಾಗಿದೆ. ಅಲ್ಲದೇ, ನಿರ್ಲಕ್ಷ್ಯ ತೋರಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ವಿಕಾಸ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಎಚ್ಚೆತ್ತ ಮಕ್ಕಳ ಹಕ್ಕು ಆಯೋಗ: ನಾಲ್ವರ ಮಕ್ಕಳ ಸರಣಿ ಸಾವಿನ ನಂತರ ರಾಜ್ಯ ಮಕ್ಕಳ ಹಕ್ಕು ಆಯೋಗ ಎಚ್ಚತ್ತುಕೊಂಡಿದೆ. ಆಯೋಗದ ಸದಸ್ಯೆ ಅನಿತಾ ಅಗರ್ವಾಲ್ ಮೃತ ಮಕ್ಕಳ ಮನೆಗೆ ಭೇಟಿ ನೀಡಿ ಪೋಷಕರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೇ, ಮಕ್ಕಳ ಸಾವಿನ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡದಿದ್ದಕ್ಕೆ ಆಸ್ಪತ್ರೆಯ ಅಧೀಕ್ಷಕರಿಗೆ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಅಧ್ಯಕ್ಷ ರವೀಂದ್ರ ಜಾದೌನ್ ಕೂಡ ಮೃತ ಮಕ್ಕಳ ಪೋಷಕರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಮಕ್ಕಳ ಸಾವಿಗೆ ಆಸ್ಪತ್ರೆಯವರ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಒತ್ತಾಯಿಸಿದರು. ಇದಾದ ಬಳಿಕ ಮಕ್ಕಳ ಹಕ್ಕು ಆಯೋಗ ಮತ್ತು ಮಕ್ಕಳ ಕಲ್ಯಾಣ ಸಮಿತಿ ತಂಡಗಳು ಆಸ್ಪತ್ರೆಗೆ ತೆರಳಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಹೃದ್ರೋಗಿ ಗರ್ಭಿಣಿಯರಲ್ಲಿ ತಾಯಂದಿರ ಮರಣ ಪ್ರಮಾಣ ಹೆಚ್ಚು: ಸಂಶೋಧನೆಯಲ್ಲಿ ಬಹಿರಂಗ