ಮೊರ್ಬಿ(ಗುಜರಾತ್): ಗುಜರಾತ್‌ನ ಮೋರ್ಬಿ ಎಂಬಲ್ಲಿ ನಡೆದ ತೂಗು ಸೇತುವೆ ದುರಂತ ಪ್ರಕರಣದಲ್ಲಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಸೇತುವೆಯನ್ನು ನವೀಕರಿಸಿದ ಒರೆವಾ ಕಂಪನಿಯ ಅಧಿಕಾರಿಗಳು, ಸೆಕ್ಯೂರಿಟಿ ಗಾರ್ಡ್‌ಗಳು ಮತ್ತು ಟಿಕೆಟ್ ಕಲೆಕ್ಟರ್‌ಗಳೂ ಸೇರಿದ್ದಾರೆ.
ಬಂಧಿತರನ್ನು ಓರೆವಾ ಗ್ರೂಪ್‌ನ ಮ್ಯಾನೇಜರ್‌ಗಳಾದ ದಿನೇಶ್ ದವೆ ಮತ್ತು ದೀಪಕ್ ಪರೇಖ್, ಟಿಕೆಟ್ ಕೌಂಟರ್ ಕ್ಲರ್ಕ್‌ಗಳಾದ ಮನ್ಸುಖ್ ಟೋಪಿಯಾ ಮತ್ತು ಮಾದೇವ್ ಸೋಲಂಕಿ ಮತ್ತು ಭದ್ರತಾ ಸಿಬ್ಬಂದಿಗಳಾದ ಅಲ್ಪೇಶ್ ಗೋಹಿಲ್, ಪ್ರಕಾಶ್ ಪರ್ಮಾರ್, ದಿಲೀಪ್ ಗೋಹಿಲ್, ಮುಖೇಶ್ ಚೌಹಾಣ್ ಮತ್ತು ದೇವಾಂಗ್ ಪರ್ಮಾರ್ ಎಂದು ಗುರುತಿಸಲಾಗಿದೆ.
ಎಫ್ಐಆರ್ನಲ್ಲಿ ತೂಗು ಸೇತುವೆಯ ನಿರ್ವಹಣೆ ಮತ್ತು ಕಾರ್ಯಾಚರಣೆ ನಡೆಸಿದ ಏಜೆನ್ಸಿಗಳನ್ನು ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಇವರ ಮೇಲೆ ಭಾರತೀಯ ದಂಡ ಸಂಹಿತೆಯ 304 ಮತ್ತು 308 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇಕಿವಾಡಿಯಾ ಹೇಳಿರುವಂತೆ, ಸ್ಥಳೀಯ ಆಡಳಿತವು ತೂಗು ಸೇತುವೆ ನಿರ್ವಹಣೆಗಾಗಿ ಖಾಸಗಿ ಏಜೆನ್ಸಿಯನ್ನು ನಿಯೋಜಿಸಿತ್ತು. ಮಚ್ಚು ನದಿಯ ಮೇಲಿನ ಸೇತುವೆಯು ಸುಮಾರು ಎಂಟು ತಿಂಗಳಿನಿಂದ ಬಳಕೆಯಾಗಿರಲಿಲ್ಲ. ಬಳಿಕ ಈ ಏಜೆನ್ಸಿಯು ಅಕ್ಟೋಬರ್ 26 ರಂದು ಸೇತುವೆಯನ್ನು ಸಾರ್ವಜನಿಕರಿಗೆ ಬಳಕೆ ಮಾಡಲು ಅನುವು ಮಾಡಿಕೊಟ್ಟಿದೆ. ಸೇತುವೆಯ ನಿರ್ವಹಣೆಯ ಗುಣಮಟ್ಟ ಹಾಗೂ ದುರಸ್ತಿ ಕಾರ್ಯದ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗಳು ಅಥವಾ ಏಜೆನ್ಸಿಗಳು ಗಮನ ಹರಿಸಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮೋರ್ಬಿ ದುರಂತದಲ್ಲಿ 141 ಸಾವು: 'ತುಂಟ ಮಕ್ಕಳು ಸೇತುವೆ ಅಲ್ಲಾಡಿಸುತ್ತಿದ್ದರು'