ವಿಜಯವಾಡ(ಆಂಧ್ರಪ್ರದೇಶ): ಎರಡನೇ ಹಂತದ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ದೇಶಾದ್ಯಂತ ಸಾವಿರಾರು ಜನರು ಡೆಡ್ಲಿ ವೈರಸ್ಗೆ ಬಲಿಯಾಗಿದ್ದಾರೆ. ಇದೀಗ ಆಂಧ್ರಪ್ರದೇಶದಲ್ಲಿ ಕೇವಲ 72 ಗಂಟೆಯಲ್ಲಿ ನಾಲ್ವರು ಸೆಕ್ರೆಟರಿಯೇಟ್ ಸಿಬ್ಬಂದಿ ಸಾವನ್ನಪ್ಪಿದ್ದು, ಇದೀಗ ಆಂಧ್ರದಲ್ಲಿ ಮತ್ತಷ್ಟು ತಲ್ಲಣ ಮೂಡಿಸಿದೆ.
ಆಂಧ್ರದಲ್ಲಿ ಮಹಾಮಾರಿ ಕೊರೊನಾದಿಂದ ಡಿಎಸ್ಪಿ ಶ್ರೇಯಾಂಕದ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಅವರ ಕುಟುಂಬದ ಸದಸ್ಯರನ್ನ ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ಬೆನ್ನಲ್ಲೇ ಕೋವಿಡ್ ಧನಾತ್ಮಕ ಪರೀಕ್ಷೆಗೊಳಗಾಗಿದ್ದ ಇಬ್ಬರು ಶಿಕ್ಷಕರು ಸಹ ಸಾವನ್ನಪ್ಪಿದ್ದಾರೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚಾಗುತ್ತಿರುವ ಕಾರಣ ಹೆಚ್ಚಿನ ಸಾವು ವರದಿಯಾಗುತ್ತಿದ್ದು, ನೌಕರರು ಕಚೇರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. 50 ವರ್ಷಕ್ಕಿಂತಲೂ ಮೇಲ್ಪಟ್ಟ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ಸಚಿವಾಲಯದ ನೌಕರರ ಅಧ್ಯಕ್ಷ ವೆಂಕಟರಾಮ್ ರೆಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರಿ ಉದ್ಯೋಗಿಗಳು ಜ್ವರದಿಂದ ಬಳಲುತ್ತಿರುವ ಕಾರಣ ಹೆಚ್ಚಿನ ಆತಂಕ ನಿರ್ಮಾಣಗೊಂಡಿದೆ. ಆಂಧ್ರಪ್ರದೇಶದಲ್ಲಿ ಇಲ್ಲಿಯವರೆಗೆ 7,410 ಜನರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ 9,62,037 ಕೋವಿಡ್ ಪ್ರಕರಣ ದಾಖಲಾಗಿವೆ. ನಿನ್ನೆ ಒಂದೇ ದಿನ 6,582 ಕೋವಿಡ್ ಪ್ರಕರಣ ದಾಖಲಾಗಿವೆ.