ತಿರುವನಂತಪುರಂ (ಕೇರಳ) : ಸುಮಾರು 48 ಗಂಟೆಗಳ ಕಾಲ ಬಾವಿಯೊಳಗೆ ಸಿಲುಕಿದ್ದ ತಮಿಳುನಾಡು ಮೂಲದ ಕಾರ್ಮಿಕ ಮಹಾರಾಜನ್ (55) ಅವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬಾವಿಯಿಂದ ಮೃತದೇಹ ಹೊರ ತೆಗೆಯಲಾಗಿದ್ದು, ತಿರುವನಂತಪುರಂ ಜಿಲ್ಲೆಯ ವಿಝಿಂಜಂನಲ್ಲಿ ಘಟನೆ ನಡೆದಿದೆ.
ಶನಿವಾರ (08 - 07 -2023) ಬೆಳಗ್ಗೆ 9.30ಕ್ಕೆ ತಮಿಳುನಾಡಿನ ಪಾರ್ವತಿಪುರಂ ನಿವಾಸಿ ಮಹಾರಾಜ್ ಬಾವಿ ಸ್ವಚ್ಛಗೊಳಿಸುವ ವೇಳೆ ಕೆಳಗೆ ಬಿದ್ದಿದ್ದು, ನೆಲದಡಿ ಹುದುಗಿ ಹೋಗಿದ್ದರು. ಬಳಿಕ, ಮೂರು ದಿನ ಹಗಲು ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಮೃತದೇಹ ಪತ್ತೆಯಾಗಿದೆ. ಬಾವಿಯಿಂದ ಮೃತದೇಹ ಹೊರ ತೆಗೆದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕಾರ್ಮಿಕ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
30 ವರ್ಷಗಳಷ್ಟು ಹಳೆಯದಾದ ಬಾವಿಯಲ್ಲಿನ ರಿಂಗ್ಗಳನ್ನು ಬದಲಾಯಿಸುವಾಗ ದುರಂತ ಸಂಭವಿಸಿದೆ. ಹಗ್ಗ ಕಟ್ಟಿಕೊಂಡು ಬಾವಿಗೆ ಅಳವಡಿಸಿದ್ದ ಪಂಪ್ ಸೆಟ್ ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ತೆಗೆದು ಹಾಕುವಾಗ ಭೂಕುಸಿತ ಉಂಟಾಗಿದ್ದು, ಸಮೀಪದಲ್ಲೇ ಇದ್ದ ಮತ್ತೊಬ್ಬ ಕಾರ್ಮಿಕ ಪವಾಡ ಸದೃಶ್ಯ ರೀತಿ ಪಾರಾಗಿದ್ದರು.
ರಕ್ಷಣಾ ಕಾರ್ಯಾಚರಣೆಗೆ ಹಲವು ಸವಾಲು : ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪರಿಣಿತ ಕಾರ್ಮಿಕರು, ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳನ್ನೊಳಗೊಂಡ 27 ಸದಸ್ಯರ ಜಂಟಿ ತಂಡವು ಮೂರು ದಿನಗಳ ಸುದೀರ್ಘ ಪ್ರಯತ್ನದ ನಂತರ ಮಹಾರಾಜನ್ ಅವರನ್ನು ಹೊರತೆಗೆಯಲಾಗಿದೆ. ಆಲಪ್ಪುಳದಿಂದ 3 ಪರಿಣಿತ ಬಾವಿ ನಿರ್ಮಾಣ ಕಾರ್ಮಿಕರನ್ನು ಸಹ ರಕ್ಷಣಾ ಕಾರ್ಯಾಚರಣೆಗಾಗಿ ಕರೆತರಲಾಗಿತ್ತು. ಶನಿವಾರ ಮತ್ತು ಭಾನುವಾರ ಹಗಲು ರಾತ್ರಿ ಕಾರ್ಯಚರಣೆ ನಡೆಸಿದಾಗ ನಿನ್ನೆ ಮಹಾರಾಜ ಅವರ ಮೃತದೇಹ ಪತ್ತೆಯಾಗಿತ್ತು.
ಮೃತ ಕಾರ್ಮಿಕ ಮಹಾರಾಜನ್ ಸುಮಾರು 16 ವರ್ಷಗಳಿಂದ ವಿಝಿಂಜಂನಲ್ಲಿ ನೆಲೆಸಿದ್ದಾರೆ. ವೆಂಗನ್ನೂರು ಮುಕೋಳ ಚೋಟುಕೋಣಂ ರಸ್ತೆ ಅಶ್ವತಿ ಎಂಬಲ್ಲಿನ ಸುಕುಮಾರನ್ ಎಂಬುವರ ಮನೆಯ ಬಾವಿಯಲ್ಲಿ ಹಳೆಯ ಕಾಂಕ್ರಿಟ್ ಕವಚದ ಮೇಲೆ ಹೊಸ ಕೇಸಿಂಗ್ ಅಳವಡಿಸುವ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಬಾವಿಯಲ್ಲಿ ಈ ಹಿಂದೆ ಭೂಕುಸಿತ ಸಂಭವಿಸಿದ ನಂತರ, ರಿಂಗ್ಗಳನ್ನು ಬದಲಾಯಿಸಲಾಗುತ್ತಿತ್ತು.
ಕಾರ್ಮಿಕ ಮಹಾರಾಜನ್ ಬಾವಿಯ ಕೆಳಭಾಗದಲ್ಲಿರುವ ಮಣ್ಣನ್ನು ತೆಗೆದು ಅಲ್ಲಿ ಅಳವಡಿಸಿದ್ದ ಪಂಪ್ ಅನ್ನು ವಾಪಸ್ ತೆಗೆದುಕೊಳ್ಳಲು ಬಾವಿಗೆ ಇಳಿದಿದ್ದರು. ಇವರಿಗೆ ಸಹಾಯ ಮಾಡುತ್ತಿದ್ದ ಕೂಲಿ ಕಾರ್ಮಿಕ ಮಣಿಕಂದನ್ (48) ಅವಘಡ ಸಂಭವಿಸಿದಾಗ ಮಹಾರಾಜನ್ಗಿಂತ ಸ್ವಲ್ಪ ಮೇಲೆ ನಿಂತಿದ್ದರು. ಮಣಿಕಂದನ್ ಸ್ವಲ್ಪದರಲ್ಲೇ ಅಪಘಾತದಿಂದ ಪಾರಾಗಿದ್ದಾರೆ. ಮೇಲ್ಭಾಗದಲ್ಲಿ ನಿಂತಿದ್ದ ಇತರೆ ಕಾರ್ಮಿಕರಾದ ವಿಜಯನ್, ಶೇಖರನ್ ಮತ್ತು ಕಣ್ಣನ್ ಸ್ವಲ್ಪ ನೀರು ಬರುತ್ತಿರುವುದನ್ನು ನೋಡಿ ಮೇಲಕ್ಕೆತ್ತಲು ಮುಂದಾದರು. ಹಗ್ಗ ಹಿಡಿದು ಹತ್ತಲು ಆರಂಭಿಸಿದಾಗ ಬಾವಿಯ ಮಧ್ಯಭಾಗದಿಂದ ಹಿಂದೆ ಹಾಕಿದ್ದ ಕಾಂಕ್ರಿಟ್ ಕವರ್ ಒಡೆದು ಮಣಿಕಂಡನ್ ಮತ್ತು ಮಹಾರಾಜರ ಮೇಲೆ ಮಣ್ಣು ಬೀಳಲು ಆರಂಭಿಸಿತು.
ಇದನ್ನೂ ಓದಿ : ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಬೀದಿನಾಯಿ ರಕ್ಷಿಸಿದ ಯುವಕ- ವಿಡಿಯೋ
ರಕ್ಷಣಾ ಕಾರ್ಯಾಚರಣೆ ಹೀಗಿತ್ತು : ಅಪಘಾತದ ಬಗ್ಗೆ ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬೆಳಗ್ಗೆ 10 ಗಂಟೆ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಪ್ರತಿ ಬಾರಿ ಸರಿಸಿದಾಗಲೂ ಬಾವಿಯ ಇಕ್ಕೆಲಗಳಿಂದ ಮಣ್ಣು ಬಂದು ಮತ್ತೆ ಬಡಿಯುತ್ತಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿತ್ತು. ಹಾಗೆಯೇ, ಮಳೆ ಸುರಿದು ಬಾವಿಯಲ್ಲಿ ನೀರು ತುಂಬಿತ್ತು. ಹೆಚ್ಚಿನ ಪ್ರಮಾಣದ ಮಣ್ಣು ಕುಸಿತದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕಳೆದ ದಿನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬಳಿಕ, ಮಳೆ ನೀರು ತುಂಬದಂತೆ ಬಾವಿಗೆ ಟರ್ಪಾಲಿನ್ ಹೊದಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಎರಡು ಪಂಪ್ ಸೆಟ್ಗಳ ಮೂಲಕ ಗಂಟೆಗಟ್ಟಲೆ ಬಾವಿಯಲ್ಲಿದ್ದ ನೀರನ್ನು ಹೊರ ಹಾಕಲಾಯಿತು. ನೀರನ್ನು ಹರಿಸಿದ ನಂತರ ಮಹಾರಾಜನ್ ಕೈಗಳು ಕಂಡುಬಂದವು.