ಭದೋಹಿ(ಉತ್ತರ ಪ್ರದೇಶ): ಸಾಮೂಹಿಕ ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಶಾಸಕ ವಿಜಯ್ ಮಿಶ್ರಾ ಪುತ್ರ ವಿಷ್ಣು ಮಿಶ್ರಾರನ್ನು ಉತ್ತರ ಪ್ರದೇಶ ವಿಶೇಷ ಪೊಲೀಸ್ ಕಾರ್ಯಪಡೆ ಭಾನುವಾರ ಪುಣೆಯಲ್ಲಿ ಬಂಧಿಸಿದೆ. ಈ ಬಗ್ಗೆ ಭದೋಹಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಮಾತನಾಡಿ, "ವಿಷ್ಣು ಮಿಶ್ರಾ ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಅವರ ಸುಳಿವು ಕೊಟ್ಟವರಿಗೆ 25,000 ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಆದರೆ ನಂತರ ಅದನ್ನು 1 ಲಕ್ಷ ರೂ.ಗೆ ಏರಿಸಲಾಗಿದೆ" ಎಂದು ಹೇಳಿದರು.
ಆಸ್ತಿ ಕಬಳಿಕೆ, ವಂಚನೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಿಶ್ರಾ ಸಂಬಂಧಿ ಕೃಷ್ಣ ಮೋಹನ್ ತಿವಾರಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. 2020ರಲ್ಲಿ ಮಾಜಿ ಶಾಸಕ ವಿಜಯ್ ಮಿಶ್ರಾರನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. ಸದ್ಯ ಅವರು ಆಗ್ರಾ ಜೈಲಿನಲ್ಲಿದ್ದು, ಪತ್ನಿ ರಾಮ್ ಲಲ್ಲಿ ಮಿಶ್ರಾ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಗಿದ್ದಾರೆ.
ಮಾಜಿ ಶಾಸಕರ ಪುತ್ರ ಆಗಸ್ಟ್ 2020 ರಿಂದ ತಲೆಮರೆಸಿಕೊಂಡಿದ್ದ. ಸೆಪ್ಟೆಂಬರ್ 2020 ರಲ್ಲಿ ವಿಷ್ಣು ಮಿಶ್ರಾ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೋರ್ಟ್ಗೆ ಹಾಜರು ಪಡಿಸುವಾಗ ಮೀಸೆ ತಿರುವಿದ ಕೇಂದ್ರ ಸಚಿವರ ಪುತ್ರ-ವಿಡಿಯೋ