ಶಿಮ್ಲಾ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಂಡಿತ್ ಸುಖ್ ರಾಮ್ (94) ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೇ 7 ರಂದು ನವದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು.
ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕ, ಸುಖ್ ರಾಮ್ ಅವರ ಮೊಮ್ಮಗ ಆಶ್ರಯ್ ಶರ್ಮಾ ಅವರು ಬುಧವಾರ ತಡರಾತ್ರಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದು, (ಅಲ್ವಿದಾ ದಾದಾಜೀ ಅಭಿ ನಹಿ ಬಜೆಗೀ ಫೋನ್ ಕಿ ಘಂಟಿ) ಎಂದು ಬರೆದು, ಸುಖ್ ರಾಮ್ ಜೊತೆಗಿನ ತಮ್ಮ ಬಾಲ್ಯದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಸುಖ್ ರಾಮ್ ಅವರು ಮೇ 4 ರಂದು ಮನಾಲಿಯಲ್ಲಿ ಬ್ರೈನ್ ಸ್ಟ್ರೋಕ್‌ಗೆ ಒಳಗಾದರು. ನಂತರ ಅವರನ್ನು ಮಂಡಿಯ ಪ್ರಾದೇಶಿಕ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಶನಿವಾರದಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ವಿಮಾನದಲ್ಲಿ ಸಾಗಿಸಲಾಗಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಮೇ 7 ರಂದು ಹಿರಿಯ ನಾಯಕನನ್ನು ದೆಹಲಿಗೆ ವಿಮಾನದಲ್ಲಿ ಸಾಗಿಸಲು ರಾಜ್ಯ ಹೆಲಿಕಾಪ್ಟರ್ ಸೇವೆ ಒದಗಿಸಿದ್ದರು.
ಸುಖ್ ರಾಮ್ ಅವರು 1993 ರಿಂದ 1996 ರವರೆಗೆ ಕೇಂದ್ರ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆಯ ಸದಸ್ಯರಾಗಿದ್ದರು. ಐದು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಮೂರು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಪಶುಸಂಗೋಪನೆ ಇಲಾಖೆ ಸಚಿವರಾಗಿದ್ದಾಗ ಜರ್ಮನಿಯಿಂದ ಹಸುಗಳನ್ನು ತಂದು, ರಾಜ್ಯದ ರೈತರ ಆದಾಯ ಹೆಚ್ಚಿಸಲು ಕಾರಣರಾಗಿದ್ದರು. 1984 ರಲ್ಲಿ ಲೋಕಸಭೆಗೆ ಆಯ್ಕೆಯಾಗಿ, ರಾಜೀವ್ ಗಾಂಧಿ ಸರ್ಕಾರದಲ್ಲಿ ಕಿರಿಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿಯ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ: ಸಚಿವ ಕೋಟ