ನವದೆಹಲಿ : ತೆಲಂಗಾಣ ಮಾಜಿ ಆರೋಗ್ಯ ಸಚಿವ ಎಟೆಲಾ ರಾಜೇಂದರ್, ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದು, ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ತೆಲಂಗಾಣ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಸಮ್ಮುಖದಲ್ಲಿ ನಡ್ಡಾ ಅವರನ್ನು ಇಂದು ಸಂಜೆ ರಾಜೇಂದರ್ ಅವರು ಭೇಟಿಯಾಗಲಿದ್ದಾರೆ. ಈ ಭೇಟಿ ಬಳಿಕ ಅವರು ಬಿಜೆಪಿ ಸೇರುವ ಕುರಿತು ಅಧಿಕೃತ ಮಾಹಿತಿ ಹೊರ ಬೀಳಲಿದೆ.
ರಾಜೇಂದರ್ ಅವರ ವಿರುದ್ಧ ಭೂ ಕಬಳಿಕೆ ಆರೋಪದ ಹಿನ್ನೆಲೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಟಿಆರ್ಎಸ್ ಅಧ್ಯಕ್ಷರು ಇತ್ತೀಚೆಗೆ ಅವರನ್ನು ಸಂಪುಟದಿಂದ ಹೊರ ಹಾಕಿದ್ದರು.
ಈ ಘಟನೆಯ ನಂತರ, ರಾಜೇಂದರ್ ಮತ್ತು ಅವರ ಕುಟುಂಬದ ವಿರುದ್ಧ ಹೆಚ್ಚಿನ ಆರೋಪಗಳು ಕೇಳಿ ಬಂದಿದ್ದು, ಪ್ರಕರಣಗಳು ಸಹ ದಾಖಲಾಗಿವೆ.
ಮೂಲಗಳ ಪ್ರಕಾರ, ರಾಜೇಂದರ್ ಅವರು ಬಿಜೆಪಿ ಪಕ್ಷಕ್ಕೆ ಸೇರುವ ಬಗ್ಗೆ ತೆಲಂಗಾಣ ಬಿಜೆಪಿಯ ಹಿರಿಯ ಮುಖಂಡ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಅವರೊಂದಿಗೆ ಈಗಾಗಲೇ ಹಲವಾರು ಸುತ್ತಿನ ಸಭೆಗಳು ನಡೆದಿವೆ.