ಚೆನ್ನೈ: ಸರ್ಕಾರಿ ಹಣ ದುರ್ಬಳಕೆ ಆರೋಪದಡಿ ತಮಿಳುನಾಡು ಮಾಜಿ ಸಚಿವೆ ಆರ್.ಇಂದಿರಾ ಕುಮಾರಿ ಅವರಿಗೆ ತಮಿಳುನಾಡಿನ ವಿಶೇಷ ವಿಚಾರಣಾ ನ್ಯಾಯಾಲಯವು 5 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
1991-1996ರಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸರ್ಕಾರದಲ್ಲಿ ಜೆ.ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರ್.ಇಂದಿರಾ ಕುಮಾರಿ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದರು. ಈ ವೇಳೆ ಶ್ರವಣದೋಷ ಮತ್ತು ದೃಷ್ಟಿಹೀನತೆ ಹೊಂದಿರುವ ವಿಶೇಷಚೇತನರಿಗಾಗಿ ಶಾಲೆ ನಿರ್ಮಿಸಲು ತಮ್ಮ ಪತಿ ನಡೆಸುತ್ತಿದ್ದ ಟ್ರಸ್ಟ್ಗೆ ಅಕ್ರಮವಾಗಿ ಸರ್ಕಾರದಿಂದ 15.45 ಲಕ್ಷ ರೂಪಾಯಿ ಹಣ ನೀಡಿದ್ದ ಆರೋಪ ಕೇಳಿ ಬಂದಿತ್ತು.
ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ತಮಿಳುನಾಡಿನ ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯವು, ಹಣ ದುರುಪಯೋಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಂದಿರಾ ಕುಮಾರಿ ಅವರಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ಅವರ ಪತಿ ನಿವೃತ್ತ ಅಧಿಕಾರಿ ಶಣ್ಮುಗಂ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತೀರ್ಪು ಪ್ರಕಟವಾದ ತಕ್ಷಣವೇ ನ್ಯಾಯಾಲಯದ ಸಭಾಂಗಣದಲ್ಲಿದ್ದ ಇಂದಿರಾ ಕುಮಾರಿಗೆ ಉಸಿರಾಟದ ತೊಂದರೆ ಉಂಟಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು.
ಇನ್ನು ಪ್ರಕರಣ ಸಂಬಂಧ ಇಂದಿರಾ ಕುಮಾರಿಯವರ ಪಿಎ ಆಗಿದ್ದ ವೆಂಕಟಕೃಷ್ಣನ್ ಅವರಿಗೆ 10,000 ರೂ ದಂಡ ವಿಧಿಸಿ ಕೇಸ್ನಿಂದ ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಲಿಸಿಯಾ ತೀರ್ಪು ನೀಡಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಅಧಿಕಾರಿ ಕಿರುಬಾಕರನ್ ಅವರು ಈಗಾಗಲೇ ಸಾವನ್ನಪ್ಪಿದ್ದಾರೆ.