ಜೈಪುರ (ರಾಜಸ್ಥಾನ): ಸಾಲ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಸ್‌ಬಿಐ ಮಾಜಿ ಅಧ್ಯಕ್ಷ ಪ್ರತೀಪ್ ಚೌಧರಿ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಜವಾಹರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನಲ್ಲಿರುವ ಅವರಿಗೆ ಅಧಿಕ ರಕ್ತದೊತ್ತಡದ ಬಗ್ಗೆ ದೂರು ನೀಡಿದ ನಂತರ ಅವರನ್ನು ನಿನ್ನೆ ಸಂಜೆ ಜವಾಹರ್ ಆಸ್ಪತ್ರೆಗೆ ಕರೆತರಲಾಗಿದೆ. ಸಾಲ ವಂಚನೆ ಪ್ರಕರಣದಲ್ಲಿ ಚೌಧರಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಜೈಸಲ್ಮೇರ್‌ನ ಸಿಜೆಎಂ ನ್ಯಾಯಾಲಯ ಸೋಮವಾರ ಆದೇಶ ನೀಡಿತ್ತು. ಹೀಗಾಗಿ ಅವರನ್ನು ಜೈಲಿನಲ್ಲಿ ಇಡಲಾಗಿತ್ತು.
ಚೌಧರಿ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜವಾಹರ್ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ ಜೆ.ಆರ್. ಪನ್ವಾರ್ ತಿಳಿಸಿದ್ದಾರೆ. ಸಾಲ ನೀಡದಿದ್ದಕ್ಕೆ ವಶಪಡಿಸಿಕೊಂಡಿದ್ದ 200 ಕೋಟಿ ರೂಪಾಯಿ ಮೌಲ್ಯದ ಜೈಸಲ್ಮೇರ್‌ನ ಫೋರ್ಟ್ ರಾಜ್‌ವಾಡ ಹೋಟೆಲ್ ಅನ್ನು ಕೇವಲ 25 ಕೋಟಿ ರೂಪಾಯಿಗೆ ಮಾರಾಟ ಮಾಡುವ ಮೂಲಕ ಪ್ರತೀಪ್ ಚೌಧರಿ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಜೈಸಲ್ಮೇರ್‌ನ ಸಿಜೆಎಂ ನ್ಯಾಯಾಲಯ ಚೌಧರಿ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಕಳೆದ ಭಾನುವಾರ ಜೈಸಲ್ಮೇರ್ ಪೊಲೀಸರು ದೆಹಲಿಯಲ್ಲಿ ಬಂಧಿಸಿ ಜೈಸಲ್ಮೇರ್‌ಗೆ ಕರೆತಂದಿದ್ದರು. ಮರುದಿನ ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ₹200 ಕೋಟಿ ಮೌಲ್ಯದ ಹೋಟೆಲ್ 25 ಕೋಟಿಗೆ ಮಾರಾಟ: SBI ಮಾಜಿ ಅಧ್ಯಕ್ಷನಿಗೆ 14 ದಿನ ನ್ಯಾಯಾಂಗ ಬಂಧನ