ನವದೆಹಲಿ: ಮಾಜಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಖರ್ ಇಂದು ಬಿಜೆಪಿ ಸೇರಿದ್ದಾರೆ. ನವದೆಹಲಿಯಲ್ಲಿ ಪಕ್ಷದ ಮುಖ್ಯ ಕಚೇರಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜಖರ್ ಅವರನ್ನು ಕೇಸರಿ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಜೆ.ಪಿ.ನಡ್ಡಾ ಮಾತನಾಡಿ, 'ಅವರೊಬ್ಬ ಅನುಭವಿ ರಾಜಕಾರಣಿ. ನಾನು ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸುತ್ತಿದ್ದೇನೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ತನ್ನದೇ ಆದ ಛಾಪು ಮೂಡಿಸಿರುವಂಥವರು. ಪಂಜಾಬ್‌ನಲ್ಲಿ ಬಿಜೆಪಿ ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುವರೆಂಬ ನಂಬಿಕೆ ನನಗಿದೆ' ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ ಬಸವರಾಜ ಹೊರಟ್ಟಿ
ಕಮಲ ಪಕ್ಷ ಸೇರಿದ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸುನಿಲ್ ಜಖರ್, 'ಕಳೆದ 50 ವರ್ಷಗಳಿಂದ ನನ್ನ ಕುಟುಂಬದ ಮೂರು ತಲೆಮಾರು ಕಾಂಗ್ರೆಸ್ ಪಕ್ಷದ ಸೇವೆ ಮಾಡಿದೆ. ಇವತ್ತು ನಾನು ಈ ಐದು ದಶಕದ ಸಂಬಂಧವನ್ನು ಅಧಿಕೃತವಾಗಿ ಕಳೆದುಕೊಳ್ಳುತ್ತಿದ್ದೇನೆ. ನನಗೆ ರಾಜಕಾರಣದಲ್ಲಿ ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರೀಯತೆ, ಒಗ್ಗಟ್ಟು ಹಾಗು ಸಹೋದರತೆ ಮುಖ್ಯ' ಎಂದರು.