ಮುಂಬೈ: ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರಿಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇಬ್ಬರನ್ನೂ ಬಂಧಿಸಿರುವ ಕ್ರಮ ಕಾನೂನಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 3,000 ಕೋಟಿ ರೂ.ಗಳ ಐಸಿಐಸಿಐ ಬ್ಯಾಂಕ್-ವೀಡಿಯೋಕಾನ್ ಸಾಲ ವಂಚನೆ ಪ್ರಕರಣದ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಡಿಸೆಂಬರ್ 29, 2022 ರಂದು ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ನ್ಯಾಯಾಲಯವು ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಚಂದಾ ಕೊಚ್ಚರ್, ದೀಪಕ್ ಕೊಚ್ಚರ್ ಮತ್ತು ವೇಣುಗೋಪಾಲ್ ಧೂತ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. 2009 ಮತ್ತು 2011 ರ ನಡುವೆ ಐಸಿಐಸಿಐ ಬ್ಯಾಂಕ್ ವಿಡಿಯೊಕಾನ್ ಗ್ರೂಪ್‌ಗೆ ವಿತರಿಸಿದ 1,875 ಕೋಟಿ ರೂಪಾಯಿ ಸಾಲದ ಮಂಜೂರಾತಿಯಲ್ಲಿನ ಅಕ್ರಮ ಮತ್ತು ಭ್ರಷ್ಟಾಚಾರಗಳು ನಡೆದಿವೆ ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಐಸಿಐಸಿಐ ಬ್ಯಾಂಕ್ ತನ್ನ ನೀತಿ ನಿಯಮಾವಳಿಗಳನ್ನು ಉಲ್ಲಂಘಿಸಿ ಜೂನ್ 2009 ಮತ್ತು ಅಕ್ಟೋಬರ್ 2011 ರ ನಡುವೆ ವಿಡಿಯೋಕಾನ್ ಗ್ರೂಪ್ ಮತ್ತು ಅದಕ್ಕೆ ಸಂಬಂಧಿಸಿದ ಕಂಪನಿಗಳಿಗೆ 1,875 ಕೋಟಿ ರೂಪಾಯಿ ಮೌಲ್ಯದ ಆರು ಸಾಲಗಳನ್ನು ಮಂಜೂರು ಮಾಡಿದೆ ಎಂದು ಸಿಬಿಐನ ಪ್ರಾಥಮಿಕ ವಿಚಾರಣೆಯಲ್ಲಿ ಕಂಡು ಬಂದಿದೆ. 2012ರಲ್ಲಿ ಈ ಸಾಲಗಳನ್ನು ಅನುತ್ಪಾದಕ ಆಸ್ತಿ ಎಂದು ಘೋಷಿಸಲಾಗಿದ್ದು, ಇದರಿಂದ ಬ್ಯಾಂಕ್‌ಗೆ 1,730 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಂಸ್ಥೆ ಹೇಳಿದೆ.
ಡಿಸೆಂಬರ್ 23 ರಂದು ವೀಡಿಯೋಕಾನ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಸಿಬಿಐ ಬಂಧಿಸಿತ್ತು. ಐಸಿಐಸಿಐ ಬ್ಯಾಂಕ್‌ನ ಆಗಿನ ಸಿಇಒ ಆಗಿದ್ದ ಚಂದಾ ಕೊಚ್ಚರ್ ಅವರು ವಿಡಿಯೋಕಾನ್ ಗ್ರೂಪ್ ಕಂಪನಿಗಳಿಗೆ ಬಹುಕೋಟಿ ಸಾಲವನ್ನು ಮಂಜೂರು ಮಾಡಿಸಿದ್ದಾರೆ ಎಂಬ ಆರೋಪವನ್ನು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯ (ಪಿಸಿಎ) ನಿಬಂಧನೆಗಳ ಅಡಿಯಲ್ಲಿ ಸಿಬಿಐ ಕ್ರಮ ಕೈಗೊಳ್ಳುವ ಮುನ್ನ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂಬ ಕಾರಣಕ್ಕಾಗಿ ಕೊಚ್ಚರ್ ದಂಪತಿ ತಮ್ಮ ಬಂಧನವನ್ನು ಅಕ್ರಮ ಎಂದು ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳ ಅಡಿಯಲ್ಲಿ 2019 ರಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಕ್ರಿಮಿನಲ್ ಪಿತೂರಿ ಮತ್ತು PCA ಯ ನಿಬಂಧನೆಗಳ ಅಡಿಯಲ್ಲಿ ಸಿಬಿಐ, ಚಂದಾ ಕೊಚ್ಚರ್, ದೀಪಕ್ ಕೊಚ್ಚರ್ ಮತ್ತು ವೇಣುಗೋಪಾಲ್ ಧೂತ್ ಜೊತೆಗೆ ದೀಪಕ್ ಕೊಚ್ಚರ್, ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ವಹಿಸುವ ನ್ಯೂಪವರ್ ರಿನ್ಯೂವಬಲ್ಸ್ (ಎನ್‌ಆರ್‌ಎಲ್) ಅನ್ನು ಆರೋಪಿಗಳೆಂದು ಹೆಸರಿಸಿದೆ. ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ನಿಯಮಾವಳಿಗಳನ್ನು ಉಲ್ಲಂಘಿಸಿ ಈ ಕಂಪನಿಗಳಿಗೆ ₹3,250 ಕೋಟಿ ಮೊತ್ತದ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದೆ ಎಂದು ಕೇಂದ್ರೀಯ ಸಂಸ್ಥೆ ಆರೋಪಿಸಿದೆ.
ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್ ಮಗನ ಮದುವೆ ರದ್ದು