ನವದೆಹಲಿ: ಸರ್ಕಾರ ದೇಶಾದ್ಯಂತ 60 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯುವಂತೆ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ 104 ವರ್ಷದ ಮಾಜಿ ವಿದೇಶಾಂಗ ಸೇವಾ ಅಧಿಕಾರಿ ತುಳಸಿದಾಸ್ ಚಾವ್ಲಾ ವ್ಯಾಕ್ಸಿನ್ ಪಡೆದಿದ್ದಾರೆ. ಈ ಮೂಲಕ ಕೊರೊನಾ ಲಸಿಕೆ ಪಡೆದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಚಾವ್ಲಾ ಪಟೇಲ್ ನಗರದಲ್ಲಿ ನೆಲೆಸಿದ್ದು, ಶನಿವಾರ ಸರ್ ಗಂಗಾ ರಾಮ್ ಆಸ್ಪತ್ರೆಗೆ ತೆರಳಿ ಕೊರೊನಾ ಲಸಿಕೆ ಹಾಕಿಸಿಕೊಂಡರು. ಬಳಿಕ ಯಾವುದಾದರೂ ಅಡ್ಡ ಪರಿಣಾಮ ಉಂಟಾಗಬಹುದೆಂದು ಇವರನ್ನು ಅರ್ಧ ಗಂಟೆ ಕಾಲ ನಿಗಾದಲ್ಲಿ ಇರಿಸಲಾಗಿತ್ತು. ಯಾವುದೇ ಅಡ್ಡಪರಿಣಾಮಗಳಿಲ್ಲದೆ ಚಾವ್ಲಾ ಸುರಕ್ಷಿತವಾಗಿ ಆಸ್ಪತ್ರೆಯಿಂದ ಹೊರ ಬಂದರು. ಬಳಿಕ ಎಲ್ಲರೂ ಲಸಿಕೆ ಪಡೆಯುವಂತೆ ಕರೆ ನೀಡಿದರು.
ಓದಿ: 325 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣ: ಹಿತೇಶ್, ಸುರೇಶ್ ಪಟೇಲ್ರನ್ನು ಬಂಧಿಸಿದ ಇಡಿ
ತುಳಸಿದಾಸ್ ಚಾವ್ಲಾ ಅವರು 1975 ರಲ್ಲಿ ಭಾರತೀಯ ವಿದೇಶಾಂಗ ಇಲಾಖೆ ಸೇವೆಯಿಂದ ನಿವೃತ್ತರಾಗಿದ್ದು, ಅಮೆರಿಕ, ನೆದರ್‌ಲ್ಯಾಂಡ್ಸ್, ಪಾಕಿಸ್ತಾನ ಮತ್ತು ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ತುಳಸಿದಾಸ್ ವೃದ್ಧರಿಗೆ ಸ್ಫೂರ್ತಿ:
60 ವರ್ಷಕ್ಕಿಂತ ಮೇಲ್ಪಟ್ಟ ಜನರು ಕೊರೊನಾ ಲಸಿಕೆ ಬಗ್ಗೆ ಹೆಚ್ಚಿನ ಉತ್ಸಾಹವನ್ನು ತೋರುತ್ತಿದ್ದಾರೆ. ಇದಕ್ಕೆ 104 ವಯಸ್ಸಿನ ಚಾವ್ಲಾ ಉತ್ತಮ ಉದಾಹರಣೆಯಾಗಿದ್ದಾರೆ. ಇವರು ಇತರ ಹಿರಿಯರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ಡಿ.ಎಸ್. ರಾಣಾ ಹೇಳಿದರು.