ನವದೆಹಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನವದೆಹಲಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿ ಕೆಲವೊಂದು ವಿಷಯಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದರು. ಇವರಿಗೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸಾಥ್ ನೀಡಿದರು.
ಇದಕ್ಕೂ ಮೊದಲು ಮಾತನಾಡಿದ ಸಿದ್ಧರಾಮಯ್ಯ, ಕಳೆದ ವಾರ ದೂರವಾಣಿ ಮೂಲಕ ರಾಹುಲ್ ಗಾಂಧಿ ಜತೆ ಮಾತನಾಡಿದ್ದೆ. ಈ ವೇಳೆ, ನಿಮ್ಮನ್ನ ಭೇಟಿಯಾಗಲು ಬರುತ್ತೇನೆ ಎಂದಾಗ ಬರುವಂತೆ ಅವರು ತಿಳಿಸಿದ್ದರು. ಅದರಂತೆ ಇಂದು 4 ಗಂಟೆಗೆ ಸಭೆ ನಿಗದಿಗೊಂಡಿದ್ದರಿಂದ ಬಂದು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಭೇಟಿ ವೇಳೆ ಕರ್ನಾಟಕ, ದೇಶದ ರಾಜಕೀಯ ಬಗ್ಗೆ ಚರ್ಚೆ ರಾಜ್ಯದಲ್ಲಿನ ಅಹಿಂದ ಹೋರಾಟ ಹಾಗೂ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ ಇದೆ.ಇನ್ನು ರಾಜ್ಯದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗೊಂದಲ ವಿಚಾರ ಕೂಡ ಈಗಾಗಲೇ ಹೈಕಮಾಂಡ್ ಅಂಗಳ ತಲುಪಿದ್ದು,ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ಸಿದ್ದರಾಮಯ್ಯ ಜೊತೆಗೆ ರಾಹುಲ್ ಗಾಂಧಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಓದಿ: ನಟ ಮಿಥುನ್ ಚಕ್ರವರ್ತಿಯನ್ನು ಭೇಟಿ ಮಾಡಿದ ಮೋಹನ್ ಭಾಗವತ್
ಕುರುಬರ ಮೀಸಲಾತಿಗೂ ರಾಹುಲ್ಗೂ ಏನ್ ಸಂಬಂಧ!?
ಕುರುಬರ ಮೀಸಲಾತಿ ಹಾಗೂ ರಾಹುಲ್ ಗಾಂಧಿಗೂ ಏನ್ ಸಂಬಂಧ ಎಂದು ಪ್ರಶ್ನೆ ಮಾಡಿರುವ ಸಿದ್ಧರಾಮಯ್ಯ, ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಬೇಕು. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಈಶ್ವರಪ್ಪ ಕೇಂದ್ರದಲ್ಲಿ ಕೇಳದೇ ರಾಜ್ಯದ ಜನರನ್ನ ಕರೆದುಕೊಂಡು ಮೀಸಲಾತಿ ನಡೆಸುತ್ತಿದ್ದು, ಯಾರ ವಿರುದ್ಧ ಈ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.