ನವದೆಹಲಿ: ಕರ್ನಾಟಕದಲ್ಲಿ ಜನರು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳ ಆಡಳಿತವನ್ನು ನೋಡಿದ್ದಾರೆ. ರಾಜ್ಯದ ಯುವಕರು ಮತ್ತು ಮಹಿಳೆಯರು ಬದಲಾವಣೆಯನ್ನು ಬಯಸಿದ್ದಾರೆ. ಶುದ್ಧ ಆಡಳಿತ ಕರ್ನಾಟಕಕ್ಕೆ ಅಗತ್ಯ ಇದ್ದು, ದೆಹಲಿಯು ಸಿದ್ಧ ಮಾದರಿಯನ್ನೇ ಅಲ್ಲಿ ಕೂಡ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುತ್ತದೆ..
ಇದು ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾತುಗಳು. ದೆಹಲಿಯಲ್ಲಿ ಆಪ್ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಅವರು ಆಮ್ ಆದ್ಮಿ ಪಕ್ಷ ಸೇರಿದರು. ಬಳಿಕ 'ಈಟಿವಿ ಭಾರತ'ದೊಂದಿಗೆ ತಮ್ಮ ಹೊಸ ಪ್ರಯಾಣದ ಬಗ್ಗೆ ಅವರು ಮಾತನಾಡಿದರು.
ಸಾಮಾನ್ಯವಾಗಿ ಚುನಾವಣೆಯ ನಂತರ ಜನರು ಬದಲಾಗುತ್ತಾರೆ. ಯಾವುದೇ ವ್ಯವಸ್ಥೆ ಬದಲಾಗುವುದಿಲ್ಲ. ಆದರೆ, ಕಳೆದ ಏಳು ವರ್ಷಗಳಲ್ಲಿ ಆಮ್ ಆದ್ಮಿ ಪಕ್ಷವು ದೆಹಲಿಯ ಚಿತ್ರಣವನ್ನೇ ಬದಲಾಯಿಸಿದೆ. ಇದರಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಭಾಸ್ಕರ್ ರಾವ್ ಹೇಳಿದರು. ನನ್ನ ಸೇವಾವಧಿ ಇನ್ನೂ ಮೂರು ವರ್ಷಗಳ ಕಾಲ ಇತ್ತು. ಆದರೆ, ನಿವೃತ್ತಿಗೆ ಮುನ್ನವೇ ನಾನೇಕೆ ಆಮ್ ಆದ್ಮಿ ಪಕ್ಷವನ್ನು ಸೇರಬಾರದು ಎಂದು ನನ್ನ ಮನಸ್ಸಿನಲ್ಲಿ ಆಲೋಚನೆ ಮೂಡಿತ್ತು ಎಂದೂ ಅವರು ಹೇಳಿದರು.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮಾಡಿದ ಆರೋಗ್ಯ, ಶಾಲೆ ಮತ್ತು ಸಾರಿಗೆ ಇತ್ಯಾದಿ ಸುಧಾರಿತ ಕೆಲಸಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ದೆಹಲಿಯಂತೆ ಕರ್ನಾಟಕದಲ್ಲೂ ಪ್ರತಿ ಹಂತದಲ್ಲೂ ಸುಧಾರಣೆ ಆಗಬೇಕಾದ ಅನಿವಾರ್ಯತೆ ಇದೆ. ಈ ಕೆಲಸ ಮಾಡಲು ದೆಹಲಿಯೇ ಸಿದ್ಧ ಮಾದರಿಯಾಗಿದ್ದು, ಅದರಲ್ಲಿ ಸ್ವಲ್ಪವನ್ನು ಅನುಷ್ಠಾನ ಮಾಡಿದರೆ ಕರ್ನಾಟಕ ಮತ್ತಷ್ಟು ಸುಧಾರಿಸಲಿದೆ ಎಂದು ಅಭಿಪ್ರಾಯಪಟ್ಟರು.
ಸಿಎಂ ಅಭ್ಯರ್ಥಿಯೇ?: ಕರ್ನಾಟಕದಲ್ಲಿ ಯಾವ ರೀತಿಯ ಸುಧಾರಣೆಗಳನ್ನು ತರುವ ಅಗತ್ಯವಿದೆ ಎಂಬ ಪ್ರಶ್ನೆಗೆ ಭಾಸ್ಕರ್ ರಾವ್, ಆಡಳಿತಾತ್ಮಕ ಮಟ್ಟದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರುವ ಅಗತ್ಯವಿದೆ. ಕರ್ನಾಟಕದ ಯುವಕರು ಬದಲಾವಣೆ ಬಯಸಿದ್ದಾರೆ. ದೆಹಲಿಯ ಮಾದರಿಯಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕಿದೆ ಎಂದರು. ಇದೇ ವೇಳೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಗುತ್ತೀರಾ ಎಂಬ ಪ್ರಶ್ನೆಗೆ ಇದನ್ನು ಪಕ್ಷ ನಿರ್ಧರಿಸುತ್ತದೆ. ಈಗಲೇ ಎಲ್ಲ ಹೇಳುವುದು ಕಷ್ಟ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್