ಚೆನ್ನೈ(ತಮಿಳುನಾಡು): ಮಲೇಷಿಯಾ ಮೂಲದ ನಟಿಯ ಮೇಲೆ ಅತ್ಯಾಚಾರ ಆರೋಪದಲ್ಲಿ ತಮಿಳುನಾಡಿನ ಮಾಜಿ ಸಚಿವ ಎಂ.ಮಣಿಕಂದನ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.
ಚೆನ್ನೈ ನಗರ ಪೊಲೀಸರು ಬೆಂಗಳೂರಿನಲ್ಲಿ ಮಣಿಕಂದನ್ನನ್ನು ಬಂಧಿಸಿದ್ದು, ಗರ್ಭಪಾತ ಮತ್ತು ಮಹಿಳೆಯ ಮೇಲೆ ಬೆದರಿಕೆ ಆರೋಪಗಳೂ ಕೇಳಿಬಂದಿವೆ. ಕೆಲವು ದಿನಗಳ ಹಿಂದೆ ಮದ್ರಾಸ್ ಹೈಕೋರ್ಟ್ ಮಣಿಕಂದನ್ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.
ಇದನ್ನೂ ಓದಿ: ತಮಿಳುನಾಡು ಮಾಜಿ ಸಚಿವ ಮಣಿಕಂದನ್ ಮೋಸ ಮಾಡಿದ್ದಾರೆಂದು ನಟಿ ದೂರು
ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದ ಕಾರಣದಿಂದ ಬಂಧನ ಭೀತಿಯಿಂದ ಮಣಿಕಂದನ್ ಬೆಂಗಳೂರಿಗೆ ಬಂದಿದ್ದರು. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತಮ್ಮನಾಯಕನಹಳ್ಳಿ ಹಸಿರುವ್ಯಾಲಿ ರೆಸಾರ್ಟ್ನಲ್ಲಿ ಆಶ್ರಯ ಪಡೆದಿದ್ದ ಅವರನ್ನು ಚೆನ್ನೈನ ಪೆರುಂಬಾಕಂ ಠಾಣೆಯ ಇನ್ಸ್ಪೆಕ್ಟರ್ ಟಿ.ವೀರಕುಮಾರ್ ನೇತೃತ್ವದ ತಂಡ ಬಂಧಿಸಿದೆ.ಭಾರತೀಯ ದಂಡಸಂಹಿತೆಯ ಸೆಕ್ಷನ್ 376, 213, 323, 417, 506 ಹಾಗೂ ಐಟಿ ಅಕ್ಟ್ ಅಡಿ ಪ್ರಕರಣಗಳಲ್ಲಿ ಮಣಿಕಂದನ್ ಪೊಲೀಸರಿಗೆ ಬೇಕಾಗಿದ್ದನು.
ಹೂಡಿಕೆ ವಿಚಾರದಲ್ಲಿ ಆದ ಸ್ನೇಹ..
2017ರಲ್ಲಿ ಮಣಿಕಂದನ್ ಐಟಿ ಸಚಿವನಾಗಿದ್ದಾಗ ನಟಿ ಪರಿಚಯವಾಗಿತ್ತು. ಮಲೇಷಿಯಾದಲ್ಲಿ ಹೂಡಿಕೆ ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಸ್ನೇಹವಾಗಿ, ಸ್ನೇಹ ಲಿವ್ ಇನ್ ರಿಲೇಷನ್ಶಿಪ್ವರೆಗೆ ಬೆಳೆದಿತ್ತು. ನಟಿಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿದ ಆರೋಪವೂ ಇವರ ಮೇಲಿದೆ. ಮೂರು ಬಾರಿ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿರುವ ಕುರಿತು ದೂರು ದಾಖಲಾಗಿದೆ.
ಇದರ ಜೊತೆಗೆ ನಟಿಯ ಕುಟುಂಬಸ್ಥರಿಗೆ ಬೆದರಿಕೆ, ನಟಿಯ ಚಿತ್ರಗಳ ಸಮೇತ ನಿಂದನಾರ್ಹ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪವೂ ಮಣಿಕಂದನ್ ಮೇಲಿದೆ.