ನವದೆಹಲಿ: ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮತ್ತು ಮಾಲ್ಡೀವ್ಸ್‌ನ ವಿದೇಶಾಂಗ ಕಾರ್ಯದರ್ಶಿ ಅಬ್ದುಲ್ ಗಫೂರ್ ಮೊಹಮ್ಮದ್ ಅವರು ಮಾಲ್ಡೀವ್ಸ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಸಭೆಯಲ್ಲಿ, ಎರಡೂ ರಾಷ್ಟ್ರಗಳ ಅಮೂಲ್ಯವಾದ ಇತಿಹಾಸವನ್ನು ಮತ್ತು ಅನೋನ್ಯ ಸಂಬಂಧವನ್ನು ವಿದೇಶಾಂಗ ಕಾರ್ಯದರ್ಶಿಗಳು ಪ್ರಸ್ತುತಪಡಿಸಿದ್ದು, ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಬಹುಮುಖಿ ಸಂಬಂಧವನ್ನು ಬಲಪಡಿಸುವ ಬಗ್ಗೆ ಗಂಭೀರವಾದ ಚರ್ಚೆ ನಡೆಸಲಾಯಿತು.
ಕೊರೊನಾ ನಂತರ ಎರಡೂ ರಾಷ್ಟ್ರಗಳ ಮೊದಲ ಸಭೆ ಇದಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ, ಕೋವಿಡ್ ಹರಡದಂತೆ ತಡೆಯಲು ಕ್ರಮ, ಎರಡೂ ರಾಷ್ಟ್ರಗಳ ನಡುವಿನ ಸಂಪರ್ಕ ಹಾಗೂ ದ್ವಿಪಕ್ಷೀಯ ವ್ಯವಹಾರದ ಬಗ್ಗೆ ಮಾತುಕತೆ ಕೂಡಾ ನಡೆಯಿತು.
ಆರೋಗ್ಯ ಸಹಕಾರ, ಸಾಂಸ್ಕೃತಿಕ ಸಹಕಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಮುಂತಾದ ವಿಚಾರಗಳಲ್ಲಿ ಭಾರತದ ಸಹಕಾರಕ್ಕೆ ಮಾಲ್ಡೀವ್ಸ್‌ನ ವಿದೇಶಾಂಗ ಕಾರ್ಯದರ್ಶಿ ಅಬ್ದುಲ್ ಗಫೂರ್ ಮೊಹಮ್ಮದ್ ಧನ್ಯವಾದ ಸಲ್ಲಿಸಿದರು.
ಭಾರತದ ನೆರೆ ಹೊರೆಯ ರಾಷ್ಟ್ರಗಳ ಪಟ್ಟಿಯಲ್ಲಿ ಮಾಲ್ಡೀವ್ಸ್ಗೆ ವಿಶೇಷ ಸ್ಥಾನವಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಈ ಹಿಂದೆ ಹೇಳಿದ್ದು, ಈಗಲೂ ಭಾರತ ಮತ್ತು ಮಾಲ್ಡೀವ್ಸ್ ಸಂಬಂಧ ಮತ್ತಷ್ಟು ಬಲಗೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗ ವಿದೇಶಾಂಗ ಕಾರ್ಯದರ್ಶಿಗಳ ನಡುವೆ ಸಭೆ ನಡೆದಿದ್ದು, ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಯಿದೆ.